ನವದೆಹಲಿ: ಜಮ್ಮು ಕಾಶ್ಮೀರದ ಪುಟ್ಟ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಮನವಿಯೊಂದನ್ನು ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
“ನನ್ನ ಊರಲ್ಲಿ ಸರಿಯಾದ ಶಾಲೆ ಇಲ್ಲ. ನಾನು ಮತ್ತು ಸಹಪಾಠಿಗಳು ಕುಳಿತುಕೊಳ್ಳಲು ಸರಿಯಾದ ಬೆಂಚುಗಳಿಲ್ಲ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರೇ ದಯವಿಟ್ಟು ನಮಗೊಂದು ಶಾಲೆಯನ್ನು ನಿರ್ಮಿಸಿ ಕೊಡಿ” ಎಂದು ಬಾಲಕಿ ಸೀರತ್ ನಾಝ್ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
ಈಗಾಗಲೇ ಈ ವಿಡಿಯೋಗೆ ಎರಡು ಮಿಲಿಯನ್ ವೀವ್ಸ್ ಸಿಕ್ಕಿದ್ದು, ಒಂದು ಲಕ್ಷಕ್ಕೂ ಹೆಚ್ಚು ಲೈಕ್ ಸಿಕ್ಕಿದೆ.
ಸುಮಾರು 5 ನಿಮಿಷಗಳ ವಿಡಿಯೋದಲ್ಲಿ ಬಾಲಕಿ ಮೊದಲು ತನ್ನನ್ನು ಮತ್ತು ತನ್ನ ಶಾಲೆಯನ್ನು ಪರಿಚಯಿಸಿ ಅನಂತರ ಶಾಲೆಯ ಪರಿಸ್ಥಿತಿ ಹೇಗಿದೆ, ಯಾವುದೆಲ್ಲ ಸೌಕರ್ಯಗಳ ಕೊರತೆ ಇದೆ ಎನ್ನುವ ಬಗ್ಗೆ ವಿಡಿಯೋ ಮಾಡಿದ್ದಾಳೆ. ಬೆಂಚುಗಳು ಇಲ್ಲದ ಕಾರಣ ತಾವು ನೆಲದಲ್ಲಿ ಕುಳಿತುಕೊಳ್ಳಬೇಕಾಗಿದ್ದು, ಈ ನೆಲ ಎಷ್ಟೊಂದು ಕೊಳಕಾಗಿದೆ ನೋಡಿ ಮೋದಿಜಿ ಎಂದು ಬಾಲಕಿ ವಿಡಿಯೋದಲ್ಲಿ ಹೇಳುತ್ತಾಳೆ.
