Tuesday, July 8, 2025
Homeಟಾಪ್ ನ್ಯೂಸ್ವಾಟ್ಸಾಪ್ ಸ್ಟೇಟಸ್‌ನಲ್ಲಿ ಮೋದಿ ಫೋಟೋ: ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ

ವಾಟ್ಸಾಪ್ ಸ್ಟೇಟಸ್‌ನಲ್ಲಿ ಮೋದಿ ಫೋಟೋ: ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ

ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷಗಳ ಕಾರ್ಯಕರ್ತರ ನಡುವಿನ ಜಗಳ, ಸಂಘರ್ಷಗಳು ಹೆಚ್ಚುತ್ತಿವೆ. ಸಾಮಾನ್ಯವಾಗಿ ಬ್ಯಾನರ್‌ ಕಟ್ಟುವ ವಿಚಾರದಲ್ಲಿ, ಪ್ರಚಾರದ ವಿಚಾರದಲ್ಲಿ ನಡೆಯುವ ಗಲಾಟೆಗಳು ವಾಟ್ಸಪ್‌ ಸ್ಟೇಟಸ್‌ ಹಾಕುವ ವಿಚಾರಕ್ಕೂ ವಿಸ್ತರಿಸಿದೆ. ಗದಗ ಜಿಲ್ಲೆಯಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ವಾಟ್ಸಪ್‌ ಸ್ಟೇಟಸ್‌ ನಲ್ಲಿ ಹಾಕಿದ್ದಾನೆಂದು ಯುವಕನೊಬ್ಬನ ಮೇಲೆ ಎಂಟು ಮಂದಿಯ ತಂಡ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಸ್ಟೇಟಸ್ ಇಟ್ಟದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಗದಗದ  ಬಿಂಕದಕಟ್ಟಿ ಗ್ರಾಮದ ರಾಘವೇಂದ್ರ ಪೂಜಾರ ಎಂಬಾತ  ಆರೋಪಿಸಿದ್ದಾನೆ.

ಗ್ರಾಮದ ಮುಖ್ಯ ಬಜಾರ್ ರಸ್ತೆಯಲ್ಲಿ ಎಂಟು ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ತನ್ನೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾರೆ. ನಾನು ಸ್ಟೇಟಸ್ ಹಾಕಿಲ್ಲ ಎಂದು ಹೇಳಿದರೂ, ಕೇಳದೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿದ್ದ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಆದರೂ ಮನೆಗೆ ನುಗ್ಗಿ ಚಾಕು, ಕಲ್ಲುಗಳ ಮೂಲಕ ಹಲ್ಲೆಗೆ ಯತ್ನಿಸಿದರು. ಅಲ್ಲದೇ ಹೀಗೆ ಮುಂದುವರಿದರೇ ಬೇರೆ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಬೆದರಿಕೆ ಹಾಕಿದ್ದಾರೆ ಎಂದು ರಾಘವೇಂದ್ರ ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಸ್ಥಳೀಯ ಬಿಜೆಪಿ ಮುಖಂಡರು ರಾಘವೇಂದ್ರನ ಜೊತೆಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತೆರಳಿ, ಘಟನೆ ಕುರಿತು ದೂರು ದಾಖಲಿಸಿದ್ದಾರೆ. ಮಲ್ಲರಡ್ಡಿ ಅಗಸಿನಕೊಪ್ಪ, ಶ್ರೀನಿವಾಸ ಅಗಸಿನಕೊಪ್ಪ ಸೇರಿದಂತೆ ಎಂಟು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. 

ಹೆಚ್ಚಿನ ಸುದ್ದಿ