ನವದೆಹಲಿ: ಪುಲ್ವಾಮಾ ದಾಳಿಯಲ್ಲಿ ಗೃಹ ಇಲಾಖೆಯ ವೈಫಲ್ಯಗಳ ಬಗ್ಗೆ ಮಾತನಾಡದಂತೆ ಪ್ರಧಾನಿ ತನಗೆ ತಿಳಿಸಿದ್ದರು ಎಂದಿರುವ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿಕೆಯನ್ನು ಉಲ್ಲೇಖಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಧಾನಿ ಅವರಿಗೆ “ದೇಶದ ನಷ್ಟ‘ಕ್ಕಿಂತ ತಮ್ಮ ‘ಮಾನನಷ್ಟ’ದ ಬಗ್ಗೆ ಆತಂಕವಿತ್ತು ಎಂದಿದ್ದಾರೆ.
ದ ವೈರ್ ನಡೆಸಿದ ಸಂದರ್ಶನದಲ್ಲಿ ಹಿರಿಯ ಪತ್ರಕರ್ತ ಕರಣ್ ಥಾಪರ್ ಜೊತೆ ಮಾತನಾಡಿರುವ ಸತ್ಯಪಾಲ್ ಮಲಿಕ್ ಪುಲ್ವಾಮಾ ದಾಳಿಗೆ ಸಂಬಂಧಿಸಿ ಸರಕಾರದ ವೈಫಲ್ಯದ ಬಗ್ಗೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು.
ಸಿಆರ್ ಪಿಎಫ್ ತನ್ನ ಯೋಧರನ್ನು ಸಾಗಿಸಲು ವಿಮಾನ ಕೇಳಿದ್ದರೂ ಗೃಹ ಇಲಾಖೆ ವಿಮಾನ ಕೊಟ್ಟಿರಲಿಲ್ಲ. ಯೋಧರು ಸಾಗುತ್ತಿದ್ದ ದಾರಿಯಲ್ಲಿ ಸರಿಯಾದ ಭದ್ರತಾ ಪರಿಶೀಲನೆ ಇರಲಿಲ್ಲ. ಈ ಲೋಪಗಳ ಬಗ್ಗೆ ಪ್ರಧಾನಿಗೆ ಹೇಳಿದಾಗ ಈ ಬಗ್ಗೆ ಯಾರೊಂದಿಗೂ ಮಾತನಾಡಬೇಡಿ ಎಂದು ಸೂಚನೆ ನೀಡಿದ್ದರು ಎಂದೆಲ್ಲಾ ಸತ್ಯಪಾಲ್ ಮಲಿಕ್ ಆರೋಪಿಸಿದ್ದರು.
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು,
“ನಾನು ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಸಂದರ್ಶನ ವೀಕ್ಷಿಸಿದೆ. ರಾಜ್ಯಪಾಲರು ಹೇಳುತ್ತಿರುವುದು ಸರಿಯಾಗಿದ್ದರೆ, ಇದು ತುಂಬಾ ಆತಂಕಕಾರಿ’’ ಎಂದು ಹೇಳಿದ್ದಾರೆ.
