ಬಿಜೆಪಿ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಬೆಳಗಾವಿಯ 18 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಇಬ್ಬರು ಹಾಲಿ ಶಾಸಕರು ಸೇರಿದಂತೆ 8 ಜನ ಆಕಾಂಕ್ಷಿಗಳಿಗೆ ಟಿಕೆಟ್ ತಪ್ಪಿದೆ. ಇವರು ಬಂಡಾಯ ಏಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಟಿಕೆಟ್ ನೀಡದ ಕಾರಣ ವೇದಿಕೆ ಮೇಲೆ ಕಣ್ಣಿರು ಹಾಕಿರುವ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಥಣಿಯಲ್ಲಿ ಸವದಿ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದು, ಟಿಕೆಟ್ ಸಿಗದಿದ್ದರೇ ಬಂಡಾಯ ಏಳುವುದಾಗಿ ಪರೋಕ್ಷವಾಗಿ ಸೂಚನೆ ನೀಡಿದ್ದರು. ಈಗಾಗಲೆ ಕಾಂಗ್ರೆಸ್ ಸವದಿಗೆ ಗಾಳ ಹಾಕಿದ್ದು, ಕೈ ಸೇರ್ಪಡೆ ಬಹುತೇಕ ಖಚಿತವಾಗಿದೆ.
ಯಮಕನಮರಡಿಯಲ್ಲಿ ಮಾರುತಿ ಅಷ್ಟಗಿಗೆ ಟಿಕೆಟ್ ಕೈ ತಪ್ಪಿದ್ದು, ಬೆಳಗಾವಿ ಉತ್ತರದಲ್ಲಿ ಹಾಲಿ ಶಾಸಕ ಅನಿಲ್ ಬೆನಕೆ, ಬೆಳಗಾವಿ ಗ್ರಾಮೀಣದಲ್ಲಿ ಸಂಜಯ್ ಪಾಟೀಲ್, ಖಾನಾಪುರದಲ್ಲಿ ಅರವಿಂದ ಪಾಟೀಲ್, , ಸವದತ್ತಿಯಲ್ಲಿ ಬಸವರಾಜ ಪಟ್ಟಣಶೆಟ್ಟಿ, ರಾಮದುರ್ಗದಲ್ಲಿ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ, ಬೈಲಹೊಂಗಲದಲ್ಲಿ ಡಾ.ವಿ.ಐ.ಪಾಟೀಲ್ ರಿಗೆ ಟಿಕೆಟ್ ದೊರೆತಿಲ್ಲ.
ಬೆಳಗಾವಿಯ ಸರಿಸುಮಾರು ಅರ್ಧಕ್ಕರ್ಧ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ತಲೆಬಿಸಿ ಆರಂಭವಾಗಿದೆ. ಟಿಕೆಟ್ ಕೈ ತಪ್ಪಿದ ಅಭ್ಯರ್ಥಿಗಳ ಪಟ್ಟಿ ದೊಡ್ಡದಾಗಿದ್ದು, ಇವರೆಲ್ಲರೂ ಪಕ್ಷೇತರರಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.