ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರವಾಗ್ತಾ ಇದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧಪಕ್ಷಗಳು ಒಗ್ಗೂಡಬೇಕೆಂಬ ಸತತ ಪ್ರಯತ್ನದ ಮತ್ತೊಂದು ಹೆಜ್ಜೆಯಾಗಿ ಇಂದು ಎನ್ ಸಿಪಿ ನಾಯಕ ಶರದ್ ಪವಾರ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ದಿಲ್ಲಿಯಲ್ಲಿ ಭೇಟಿಯಾಗಿದ್ದಾರೆ.
ವಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ಕಾರ್ಯತಂತ್ರಗಳ ಬಗ್ಗೆ ಅವರು ಈ ಭೇಟಿಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ.
“ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಸಹಿತ ಅನೇಕ ನಾಯಕರ ಜೊತೆ ನಾವು ಮಾತುಕತೆ ಆರಂಭಿಸಬೇಕಾಗಿದೆ. ನಾವೇ ಮುಂದೆ ನಿಂತು ಅವರನ್ನು ತಲುಪಬೇಕಾಗಿದೆ. ಈ ಮೂಲಕ ವಿರೋಧ ಪಕ್ಷಗಳನ್ನು ಒಗ್ಗಟ್ಟಾಗಿಸಬೇಕಾಗಿದೆ” ಎಂದು ಶರದ್ ಪವಾರ್ ಮಾಧ್ಯಮದವರ ಜೊತೆ ಹೇಳಿದರು.
” ನಿನ್ನೆಯಷ್ಟೇ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ನನ್ನ ಜೊತೆ ಮತ್ತು ರಾಹುಲ್ ಗಾಂಧಿ ಜೊತೆ ಮಾತನಾಡಿದರು. ಇಂದು ಶರದ್ ಪವಾರ್ ಬಂದಿರುವುದರಿಂದ ಸಂತೋಷವಾಗಿದೆ. ದೇಶದಲ್ಲಿ ವಿರೋಧ ಪಕ್ಷಗಳನ್ನು ಒಗ್ಗಟ್ಟಾಗಿಸಲು ನಾವು ಪ್ರಯತ್ನಿಸಲಿದ್ದೇವೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ “ನಾವೆಲ್ಲ ಒಗ್ಗಟ್ಟಾಗಿದ್ದೇವೆ” ಎಂದು ಹೇಳಿದ್ದು ವಿರೋಧ ಪಕ್ಷಗಳ ಒಗ್ಗಟ್ಟಿಗೆ ಮೊದಲ ಹೆಜ್ಜೆಯಾಗಲಿದೆ ಎಂದು ಭಾವಿಸಲಾಗಿದೆ.
