Tuesday, July 8, 2025
Homeಚುನಾವಣೆ 2023ಸಿದ್ದು ವಿರುದ್ಧ ಸ್ಪರ್ಧಿಸಲು ಸಿದ್ಧ : ವಿ. ಸೋಮಣ್ಣ ಘೋಷಣೆ

ಸಿದ್ದು ವಿರುದ್ಧ ಸ್ಪರ್ಧಿಸಲು ಸಿದ್ಧ : ವಿ. ಸೋಮಣ್ಣ ಘೋಷಣೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ಸಿದ್ದವಿದ್ದೇನೆ ಎನ್ನುವ ಮೂಲಕ ವಸತಿ ಸಚಿವ ವಿ. ಸೋಮಣ್ಣ ಚುನಾವಣಾ ರಣಕದನಕ್ಕೆ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಮಂಗಳವಾರ ರಾತ್ರಿ ಬಿಡುಗಡೆಯಾದ ಬಿಜೆಪಿ ಮೊದಲ ಪಟ್ಟಿಯಲ್ಲಿ ವಿ. ಸೋಮಣ್ಣನವರಿಗೆ ಚಾಮರಾಜನಗರ ಹಾಗೂ ವರುಣಾ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗಿತ್ತು.
ಬುಧವಾರ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿ.ಸೋಮಣ್ಣ, ಬಿಜೆಪಿ ಎಲ್ಲಾ ಹಿರಿಯ ನಾಯಕರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ರಾಜ್ಯದ ಬಿಜೆಪಿ ನಾಯಕರಿಗೆ ಮಾತ್ರವಲ್ಲ ರಾಷ್ಟ್ರೀಯ ಬಿಜೆಪಿ ನಾಯಕರಿಗೂ ಸಹ ಒಬ್ಬ ಸೋಮಣ್ಣ ಏನು ಸಾಧಿಸಬಲ್ಲ ಎಂಬ ಅರಿವಿದೆ. ಹೀಗಾಗಿಯೇ ಇಂಥದ್ದೊಂದು ಮಹತ್ವದ ಹೊಣೆಗಾರಿಕೆಯನ್ನು ನನ್ನ ಮೇಲೆ ಹೊರಿಸಿದ್ದಾರೆ. ಪಕ್ಷ ನೀಡಿರುವ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇನೆ ಎಂದು ನುಡಿದಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ಯಾವುದೇ ಅಳುಕಿಲ್ಲವೆಂಬ ಸಂದೇಶವನ್ನು ಸೋಮಣ್ಣ ಹೊರಹಾಕಿದ್ದಾರೆ.
ಎರಡೂ ಕ್ಷೇತ್ರಗಳಲ್ಲಿ ಸೋತರೆ ನಿಮ್ಮ ರಾಜಕೀಯ ಭವಿಷ್ಯ ಅಂತ್ಯವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಖಾಲಿ ಚೀಲ ಹಿಡಿದು ಬೆಂಗಳೂರಿಗೆ ಬಂದ ನಾನು ಇಂದು ಈ ಮಟ್ಟಿಗೆ ಬೆಳೆದಿದ್ದೇನೆ. ಭೂಗಳ್ಳರು, ಭ್ರಷ್ಟರು ರಾಜ್ಯದಲ್ಲಿ ತುಂಬಿ ತುಳುಕುತ್ತಿದ್ದು ನಾನು ಅವರ ಭ್ರಷ್ಟಾಚಾರವನ್ನು ಬಯಲು ಮಾಡುವ ಮೂಲಕ ಚುನಾವಣೆ ಎದುರಿಸುತ್ತೇನೆ. ವರುಣಾ ಚಾಮರಾಜನಗರ ಮಾತ್ರವಲ್ಲ ಗೋವಿಂದರಾಜನಗರದಲ್ಲೂ ಗೆದ್ದು ತೋರಿಸುತ್ತೇನೆ. ಗೋವಿಂದರಾಜನಗರ ನನ್ನ ಜನ್ಮಭೂಮಿಯಾದರೆ ವರುಣಾ ನನ್ನ ಕರ್ಮಭೂಮಿ, ಜನ್ಮಭೂಮಿಯಿಂದ ಕರ್ಮಭೂಮಿಗೆ ಹೋಗುತ್ತಿದ್ದೇನೆ ಎಂದು ಉತ್ತರಿಸಿದರು.
ಗೋವಿಂದರಾಜನಗರಕ್ಕೆ ಅರುಣ್ ಸೋಮಣ್ಣ ಉಮೇದುವಾರಿಕೆ ನನಗೆ ಸಂಬಂಧಿಸಿದ ವಿಷಯವಲ್ಲ. ಅದನ್ನು ತೀರ್ಮಾನ ಮಾಡುವುದು ನಮ್ಮ ವರಿಷ್ಠರು. ನನ್ನ ಕಾರ್ಯಕರ್ತರಾಗಲೀ ನನ್ನ ಮುಖಂಡರಾಗಲೀ ಕೈಬಿಡುವುದಿಲ್ಲ ಎಂಬ ನಂಬಿಕೆಯಿದೆ ಎಂದು ಸೋಮಣ್ಣ ನುಡಿದಿದ್ದಾರೆ.

ಹೆಚ್ಚಿನ ಸುದ್ದಿ