ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಮೋದಿ ಉಪನಾಮ ಬಳಸುವ ಸಮುದಾಯಕ್ಕೆ ಅವಹೇಳನ ಮಾಡಿದ್ದಾರೆಂಬ ಆರೋಪ ಸಾಬೀತಾಗಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆಯನ್ನು ಸೂರತ್ ನ್ಯಾಯಾಲಯ ವಿಧಿಸಿದೆ.
ಯಾವುದಾದರೂ ಪ್ರಕರಣದಲ್ಲಿ ಆರೋಪ ಸಾಬೀತಾಗಿ, ದೋಷಿ ಎಂದು ತೀರ್ಪು ಬಂದರೆ ಜನಪ್ರತಿನಿಧಿ ಕಾಯ್ದೆ ಪ್ರಕಾರ ಸದಸ್ಯತ್ವ ರದ್ದಾಗಲಿದ್ದು, ಅದರಂತೆ ರಾಹುಲ್ ಗಾಂಧಿ ಅವರನ್ನು ಆರ್ಟಿಕಲ್ 102(1)(ಇ) ನ ನಿಬಂಧನೆಗಳ ಪ್ರಕಾರ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.
ಭಾರತದ ಸಂವಿಧಾನವು 1951 ರ ಪ್ರಜಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 8 ರೊಂದಿಗೆ ಹೇಳಿರುವಂತೆ ಈ ಕ್ರಮವನ್ನು ಜಾರಿಗೊಳಿಸಲಾಗಿದೆ ಎಂದು ಲೋಕಸಭೆಯ ಕಾರ್ಯದರ್ಶಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಪ್ರಕರಣದ ಸಂಪೂರ್ಣ ವಿವರ:
ಪ್ರಕರಣ ಆರಂಭಗೊಳ್ಳುವುದು 2019 ರಲ್ಲಿ. ಈ ಘಟನೆ ಜರುಗಿದ್ದು ಕರ್ನಾಟಕದ ಕೋಲಾರದಲ್ಲಿ. 2019 ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕೋಲಾರದಲ್ಲಿ ಮಾಡಿದ ಭಾಷಣವೇ ರಾಹುಲ್ ಗಾಂಧಿಗೆ ಸಂಕಷ್ಟ ತಂದೊಡ್ಡಿದೆ. ಆಗ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ (ಪ್ರಸ್ತುತ ಸಂಸದ) ಕೆಎಚ್ ಮುನಿಯಪ್ಪ ಪರ ಪ್ರಚಾರಕ್ಕೆ ಬಂದಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದರು.
ನೀರವ್ ಮೋದಿ, ಲಲಿತ್ ಮೋದಿ ಅದಾಗಲೇ ಬ್ಯಾಂಕ್ ಹಗರಣದಲ್ಲಿ ಸಿಲುಕಿದ್ದರು. ಜನಧನ್ ಅಕೌಂಟ್ ವಿಚಾರ ದ ಬಗ್ಗೆ ಪ್ರಸ್ತಾಪಿಸಿ ಆ ಯೋಜನೆಯನ್ನು ಟೀಕಿಸುವ ಭರದಲ್ಲಿ ನೀರವ್ ಹಾಗೂ ಲಲಿತ್ ಮೋದಿ ಜೊತೆ ಪ್ರಧಾನಿ ಹೆಸರನ್ನೂ ಎಳೆದು ತಂದು ಈ ಎಲ್ಲರಿಗೂ ಮೋದಿ ಉಪನಾಮವೇ ಏಕಿದೆ.? ಹುಡುಕುತ್ತಾ ಹೋದರೆ ಇಂಥ ಮೋದಿಗಳು ಬಹಳಷ್ಟು ಮಂದಿ ಸಿಗುತ್ತಾರೆ ಎಂದುಬಿಟ್ಟರು.
ರಾಹುಲ್ ಗಾಂಧಿ ಅವರ ಈ ಹೇಳಿಕೆ ಆಧರಿಸಿ ಗುಜರಾತಿನ ಬಿಜೆಪಿ ಶಾಸಕ ಪೂರ್ಣೆಶ್ ಮೋದಿ ಸೂರತ್ ನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಕ್ರಿಮಿನಲ್ ಮಾನಹಾನಿ ದೂರು ದಾಖಲು ಮಾಡಿದ್ದರು. ಈ ಪ್ರಕರಣದಲ್ಲಿ ಮುಳಬಾಗಿಲಿನ ಬಿಜೆಪಿ ನಾಯಕ ಪಿ.ಎಂ ರಘುನಾಥ್ ರಾಹುಲ್ ವಿರುದ್ಧ ಸಾಕ್ಷಿ ನುಡಿದಿದ್ದರು.
ರಾಹುಲ್ ಗಾಂಧಿ ಹೇಳಿಕೆಯ ವಿಡಿಯೋ ಸಂಗ್ರಹಿಸಿ, ಗುಜರಾತಿನ ಶಾಸಕ ಪೂರ್ಣೇಶ್ ಮೋದಿಯನ್ನು ಸಂಪರ್ಕಿಸಿದ್ದ ರಘುನಾಥ್, ರಾಹುಲ್ ವಿರುದ್ಧ ಪ್ರಕರಣ ದಾಖಲಿಸುವಂತೆ ಮಾಡಿದ್ದರು. ಬಳಿಕ ಪ್ರಕರಣದಲ್ಲಿ ಸಾಕ್ಷಿಯೂ ಆದರು.
ನಂತರ ವಿಚಾರಣೆ ಕೈಗೆತ್ತುಕೊಂಡ ಸೂರತ್ ನ್ಯಾಯಾಲಯ ನೆನ್ನೆ ರಾಹುಲ್ ಗಾಂಧಿಗೆ ಮಾನಹಾಕಿ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಿತು. ಅದರ ಜೊತೆಗೆ 15,000 ರುಪಾಯಿ ದಂಡ ವಿಧಿಸಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಅವಕಾಶವನ್ನೂ ನೀಡಿದೆ.
ಈ ತೀರ್ಪನ್ನಾಧರಿಸಿ ಇಂದು ಲೋಕಸಭಾ ಸ್ಪೀಕರ್ ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ