Saturday, April 25, 2026
Homeಚುನಾವಣೆ 2023ಮತ್ತೆ ಜೆಡಿಎಸ್ ನತ್ತ ಮುಖ ಮಾಡಿದ ವೈಎಸ್‌ವಿ ದತ್ತಾ

ಮತ್ತೆ ಜೆಡಿಎಸ್ ನತ್ತ ಮುಖ ಮಾಡಿದ ವೈಎಸ್‌ವಿ ದತ್ತಾ

ಬೆಂಗಳೂರು: ಕಡೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷೆ ಹೊತ್ತು ಕಾಂಗ್ರೆಸ್ ಪಕ್ಷಕ್ಕೆ ತೆರಳಿದ್ದ ವೈಎಸ್‌ವಿ ದತ್ತಾ ಈಗ ಮತ್ತೆ ಜೆಡಿಎಸ್ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ದೇವೇಗೌಡರನ್ನು ಭೇಟಿಯಾಗಿ ದತ್ತಾ ಚರ್ಚೆ ನಡೆಸಿದ್ದಾರೆ.
ಜೆಡಿಎಸ್ ವರಿಷ್ಠರಾದ ದೇವೇಗೌಡರಿಗೆ ಒಂದು ಕಾಲದಲ್ಲಿ ಮಾನಸ ಪುತ್ರ ಎಂದೇ ಪರಿಗಣಿತರಾಗಿದ್ದ ವೈಎಸ್‌ವಿ ಇಂದು ಟಿಕೆಟ್ ಗಾಗಿ ಬೇಡಿಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಬೇಷರತ್ತಾಗಿ ಜೆಡಿಎಸ್ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ. ಆದರೆ ದೇವೇಗೌಡರು, ಟಿಕೆಟ್ ಬಗ್ಗೆ ಯಾವುದೇ ಭರವಸೆಯನ್ನು ನೀಡಿಲ್ಲ. ಕುಮಾರಸ್ವಾಮಿಯವರೊಡನೆ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಇತ್ತೀಚಿಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ವೈಎಸ್‌ವಿ ದತ್ತಾರನ್ನು ಮರಳಿ ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಳ್ಳುವಿರಾ ಎಂಬ ಬಗ್ಗೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ನಮ್ಮದು ಸಣ್ಣ ಪ್ರಾದೇಶಿಕ ಪಕ್ಷ. ನಮ್ಮನ್ನು ತೊರೆದು ಇಂಟರ್ ನ್ಯಾಷನಲ್ ಪಕ್ಷಕ್ಕೆ ಸೇರ್ಪಡೆಯಾಗಿದ್ದವರ ಅವಶ್ಯಕತೆ ನಮಗಿಲ್ಲ ಎಂದು ಕಿಡಿಕಾರಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕೊಡುವ ಜಾಗದಲ್ಲಿದ್ದವರು ಈಗ ಬೇಡುವ ಜಾಗಕ್ಕೆ ಹೋಗಿದ್ದಾರೆ ಎಂದು ಲೇವಡಿ ಮಾಡಿದ್ದರು.

ಹೆಚ್ಚಿನ ಸುದ್ದಿ