ಅಹ್ಮದಾಬಾದ್: ನಿನ್ನೆ ( ಜೂನ್ 12) ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆಗಿ ಹೊರಟ ಏರ್‌ಇಂಡಿಯಾ ವಿಮಾನ ಕೆಲವೇ ದೂರ ಕ್ರಮಿಸುವಷ್ಟರಲ್ಲಿ ಪೂರ್ಣ ಪ್ರಮಾಣದ ಟೇಕ್‌ಆಫ್ ಆಗುವ ಮುನ್ನವೇ ನೆಲಕ್ಕೆ ಬಿದ್ದಿತ್ತು.
ನಗರದ ಮೇಘಾನಿ ಪ್ರದೇಶದ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ವಿಮಾನ ಬಿದ್ದು ದೊಡ್ಡ ಮಟ್ಟದಲ್ಲಿ ಸ್ಪೋಟಗೊಂಡಿತ್ತು.
ಪರಿಣಾಮ ವಿಮಾನದಲ್ಲಿದ್ದ 242 ಮಂದಿ ಪೈಕಿ 241 ಮಂದಿ ದುರ್ಮರಣ ಹೊಂದಿದರು. ಅಲ್ಲದೇ ವಿಮಾನ ಹಾಸ್ಟೆಲ್ ಕ್ಯಾಂಟೀನ್‌ಗೆ ನುಗ್ಗಿದ್ದರಿಂದ ಅಲ್ಲಿದ್ದ 24 ವಿದ್ಯಾರ್ಥಿಗಳೂ ಸಹ ಸಾವನ್ನಪ್ಪಿದ್ದರು.
ಇನ್ನು ಇಷ್ಟು ದೊಡ್ಡ ಮಟ್ಟದ ಅವಘಡ ಸಂಭವಿಸಿದರೂ ವಿಮಾನದಲ್ಲಿದ್ದ ಓರ್ವ ಪ್ರಯಾಣಿಕ ಮಾತ್ರ ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದಾರೆ. ರಮೇಶ್ ವಿಶ್ವಕುಮಾರ್ ಎಂಬ ಪ್ರಯಾಣಿಕ ಬದುಕುಳಿದಿದ್ದು ಆತನನ್ನು ನಗರದ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
11 ಎ ಸೀಟ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ರಮೇಶ್ ವಿಶ್ವಕುಮಾರ್ ಬದುಕುಳಿಯಲು ಕಾರಣ ಸನಿಹದಲ್ಲೇ ಇದ್ದ ಎಮರ್ಜೆನ್ಸಿ ಎಕ್ಸಿಟ್ ಕಾರಣ ಎಂದು ಊಹಿಸಲಾಗಿತ್ತು. ಆದರೆ ಸ್ವತಃ ರಮೇಶ್ ಈ ಕುರಿತು ಮಾತನಾಡಿದ್ದು, ತಾವು ಬದುಕುಳಿದ ರೀತಿಯನ್ನು ಬಿಚ್ಚಿಟ್ಟಿದ್ದಾರೆ. ಅಸಲಿಗೆ ರಮೇಶ್ ಎಮರ್ಜೆನ್ಸಿ ಎಕ್ಸಿಟ್ ಅನ್ನು ಬಳಸಿಯೇ ಇಲ್ಲ. ಎಲ್ಲರ ರೀತಿ ಅವರೂ ಸಹ ವಿಮಾನದಲ್ಲೇ ಇದ್ದರು.
ʼವಿಮಾನ ಟೇಕ್‌ಆಫ್ ಆದ ನಿಮಿಷದೊಳಗೆ ಎಲ್ಲವೂ ನಡೆದುಹೋಯಿತು. ದೊಡ್ಡ ಶಬ್ದ ಬರುತ್ತಿದ್ದಂತೆ ವಿಮಾನ ಪತನವಾಯಿತು. ನಾನು ಎದ್ದಾಗ ನನ್ನ ಸುತ್ತಲೂ ಮೃತದೇಹಗಳಿದ್ದವು. ನನಗೆ ಅತಿಯಾದ ಭಯವಾಗಿ ನಾನು ಅಲ್ಲಿಂದ ಓಡಲು ಆರಂಭಿಸಿದೆ. ಆ ಸಮಯದಲ್ಲಿ ಯಾರೋ ಒಬ್ಬರು ನನ್ನನ್ನು ಹಿಡಿದು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆತಂದರುʼ ಎಂದು ಹೇಳಿಕೆ ನೀಡಿದ್ದಾರೆ