Thursday, June 25, 2026
Homeಟಾಪ್ ನ್ಯೂಸ್ಜಿಪಂ ಸಿಇಓ ಮಾತಿಗೆ ಕಿಮ್ಮತ್ತು ಕೊಡದ ಪಿಡಿಓಗಳು...! ಮುದ್ದೇಬಿಹಾಳದ ಗುಂಡಖರ್ಜಗಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ...!!!

ಜಿಪಂ ಸಿಇಓ ಮಾತಿಗೆ ಕಿಮ್ಮತ್ತು ಕೊಡದ ಪಿಡಿಓಗಳು…! ಮುದ್ದೇಬಿಹಾಳದ ಗುಂಡಖರ್ಜಗಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ…!!!

ಮುದ್ದೇಬಿಹಾಳ:
ತಾಲೂಕಿನ ರೂಢಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂಡಖರ್ಜಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಇದರ ಬಗ್ಗೆ ಪಿಡಿಓ ಅವರಿಗೆ ಸಾಕಷ್ಟು ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಮಂಗಳವಾರ ಗ್ರಾಮಸ್ಥರು ಮುದ್ದೇಬಿಹಾಳ ತಾಲೂಕ ಪಂಚಾಯತ ಗೇಟ್ ಎದುರಿಗೆ ಖಾಲಿ ಕೊಡಗಳನ್ನಿಟ್ಟು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ರಂಗಪ್ಪ ಸುಗುಂಡರ, ಗುಂಡಖರ್ಜಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಸುಮಾರು 25 ಮನೆಗಳಿಗೆ ಪೈಪ್‌ಲೈನ ಇಲ್ಲದ ಕಾರಣ ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತಗೊಂಡಿವೆ. ಇದರ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಗ್ರಾಮಸ್ಥರ ಮನವಿಗೆ ಸ್ಪಂದನೆ ನೀಡುತ್ತಿಲ್ಲ. ಪ್ರತಿ ಬಾರಿಯೂ ಇನ್ನೂ ಎರಡು ದಿನಗಳಲ್ಲಿ ಮಾಡುತ್ತೇವೆ ಎಂದು ಸಮಜಾಯಿಷಿ ಉತ್ತರ ನೀಡುತ್ತಾ ಬಂದಿದ್ದಾರೆ. ಈ ಬಾರಿ ಮಳೆ ಇಲ್ಲದೆ ಗ್ರಾಮಸ್ಥರು ಕಂಗಾಲಾಗಿದ್ದಾರೆ. ದನಕರುಗಳಿಗೂ ನೀರು ಇಲ್ಲದಂತಾಗಿದೆ. ಕೂಡಲೇ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಿಕೊಡಬೇಕೆಂದು ಆಗ್ರಹಿಸಿದರು.


ಮೇಲಾಧಿಕಾರಿಗಳ ಮಾತಿಗೂ ಕಿಮ್ಮತ್ತಿಲ್ಲ:
ಇತ್ತಿಚಿಗಷ್ಟೇ ವಿಜಯಪುರ ಜಿಪಂ ಸಿಇಓ ಅವರು ಅಧಿಕಾರಿಗಳ ಸಭೆ ನಡೆಸಿ ಗ್ರಾಮೀಣ ಭಾಗದ ಜನರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೋಳ್ಳಬೇಕು. ಇದಕ್ಕೆ ಬೇಕಾದ ಅಗತ್ಯತೆಯನ್ನು ಕೂಡಲೇ ಕಛೇರಿಯಿಂದ ಪಡೆದುಕೊಂಡು ಜನರಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದರು. ಆದರೆ ಕೆಲ ಸ್ಥಳೀಯ ಪಂಚಾಯತ ಅಧಿಕಾರಿಗಳು ಇದರ ಬಗ್ಗೆ ತೆಲೆಕೆಡಿಸಿಕೊಳ್ಳದೇ ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಅಧಿಕಾರಿಗಳ ಬಗ್ಗೆ ಸ್ಥಳೀಯ ತಾಪಂ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದು ಗ್ರಾಮಸ್ಥರ ಸಮಸ್ಯೆಯನ್ನು ಬಗೆಹರಿಸುವಂತೆ ಮಾಡಬೇಕು ಎಂದು ಯುವ ಹೋರಾಟಗಾರ ಆನಂದ ಮುದೂರ ಆಗ್ರಹಿಸಿದರು.


ಲಿಖಿತ ಭರವಸೆ ಪಟ್ಟು:
ತಾಪಂ ಎದುರಿಗೆ ಹೋರಾಟಕ್ಕೆ ಕುಳಿತ ಗುಂಡಖರ್ಜಗಿ ಗ್ರಾಮಸ್ಥರ ಮನವಿಗೆ ಸ್ಪಂದನೆ ನೀಡಲು ಮುಂದಾದ ತಾಪಂ ಅಧಿಕಾರಿಗಳು ಕೂಡಲೇ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದರು. ಆದರೆ ಗ್ರಾಮಸ್ಥರು ಸಮಸ್ಯೆ ಬಗೆಹರಿಸುವ ಬಗ್ಗೆ ಲಿಖಿತವಾಗಿ ಭರವಸೆಯನ್ನು ನೀಡಬೇಕು ಹಾಗೂ ಪಂಚಾಯತಿಯಿಂದ ನೀರಿನ ಪೈಪ್‌ಲೈನ್ ಆಗುವವರೆಗೂ ಯೋಗ್ಯ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕು ಎಂದು ಪಟ್ಟು ಹಿಡಿದರು.


ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸಲಾಗುವುದು:
ಪ್ರತಿಭಟನೆ ನಡೆಯುತ್ತಿರುವ ಮಾಹಿತಿ ಪಡೆದ ರೂಢಗಿ ಪಿಡಿಓ ಭಾರತಿ ಚಿನ್ನೂರ, ಇನ್ನೂ ಎರಡು ದಿನಗಳಲ್ಲಿ ಪೈಪ್‌ಲೈನ್ ಮಾಡಿಸುವ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಹಾಗೂ ಅಲ್ಲಿಯವರೆಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಲಿಖಿತ ಭರವಸೆಯನ್ನು ನೀಡಿದಾಗ ಪ್ರತಿಭಟನಾಕಾರರು ಹೋರಾಟವನ್ನು ಕೈಬಿಟ್ಟರು.


ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಾಜಬಿ ಚಪ್ಪರಬಂದ, ಬಸಲಿಂಗವ್ವ ಬಿರಾದಾರ, ನಾಗಮ್ಮ ಪೂಜಾರಿ, ಜನತಬಿ ಚಪ್ಪರಬಂದ, ಶ್ರೀದೇವಿ ಹಳ್ಳಿಚಂಡಿ, ಬಸವರಾಜ ಚಲವಾದಿ, ಪರಶುರಾಮ ಬಸರಕೋಡ, ಮುತ್ತು ಅಮರಗೋಳ, ಶ್ರೀಧರ ಮುದೂರ ಇದ್ದರು.

ಕುಡಿಯುವ ನೀರಿಗಾಗಿ ಸರಕಾರ ಸಾಕಷ್ಟು ಸೌಲಭ್ಯಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಒದಗಿಸಿದ್ದಾರೆ. ಆದರೆ ಕೆಲ ಅಧಿಕಾರಿಗಳು ಮಾತ್ರ ಇದರ ಬಗ್ಗೆ ತೆಲೆ ಕೆಡೆಸಿಕೊಳ್ಳುತ್ತೀಲ್ಲ. ಗ್ರಾಪಂ ಅಧಿಕಾರಿಗಳ ಮೇಲಾಧಿಕಾರಿಗಳು ಕೂಡಲೇ ಸಭೆ ನಡೆಸಿ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ನೀಡಿಕೊಳ್ಳಬೇಕು ಎಂದು ಸೂಚಿಸಬೇಕು. ಇಲ್ಲವಾದಲ್ಲಿ ತಾಲೂಕಿನ ಇನ್ನಿತರ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇದ್ದು ಎಲ್ಲರೂ ತಾಲೂಕ ಪಂಚಾಯತಿ ಎದುರಿಗೆ ಪ್ರತಿಭಡನೆ ಮಾಡುವುದು ಅನಿವಾರ್ಯವಾಗುತ್ತದೆ.”

– ಆನಂದ ಮುದೂರ, ಯುವ ಹೋರಾಟಗಾರ, ಮುದ್ದೇಬಿಹಾಳ.

ಹೆಚ್ಚಿನ ಸುದ್ದಿ