ಕುಕನೂರು: ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರಡ್ಡಿ ಅವರ ಪುತ್ರಿ ಮಮತಾ ರಾಯರಡ್ಡಿ ಅವರು ಮಾರ್ಚ್ 14 ರಂದು ಕುಕನೂರಿನಲ್ಲಿ ಹಮ್ಮಿಕೊಂಡಿರುವ ಮಹಿಳಾ ದಿನಾಚರಣೆ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.
ಸಮಾಜ ಸೇವೆಗೆ ಒತ್ತು:
ಮಮತಾ ರಾಯರಡ್ಡಿ ಅವರ ‘ಆರಾಮ್’ ಎನ್ಜಿಒ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 14 ಮಹಿಳೆಯರಿಗೆ “ಕೊಪ್ಪಳ ಸ್ತ್ರೀ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ರಾಜಕೀಯ ವಲಯದಲ್ಲಿ ಸಂಚಲನ:
ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಮಮತಾ ರಾಯರಡ್ಡಿ ಅವರು ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ವದಂತಿಗಳು ಬಲವಾಗಿ ಹರಿದಾಡುತ್ತಿವೆ. ಈ ಬೆನ್ನಲ್ಲೇ ಬೃಹತ್ ಮಟ್ಟದಲ್ಲಿ ಕಾರ್ಯಕ್ರಮ ಸಂಘಟಿಸುತ್ತಿರುವುದು ರಾಜಕೀಯ ಲೆಕ್ಕಾಚಾರಗಳಿಗೆ ವೇದಿಕೆಯಾಗಿದೆಯೇ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.
ಸ್ಪಷ್ಟನೆ ನೀಡಿದ ಮಮತಾ ರಾಯರಡ್ಡಿ:
ತಮ್ಮ ರಾಜಕೀಯ ಪ್ರವೇಶದ ವದಂತಿಗಳಿಗೆ ಪ್ರತಿಕ್ರಿಯಿಸಿರುವ ಮಮತಾ ಅವರು, “ಸದ್ಯಕ್ಕೆ ನನಗೆ ರಾಜಕೀಯದ ಯಾವುದೇ ಉದ್ದೇಶವಿಲ್ಲ. ಕೇವಲ ಸಮಾಜ ಸೇವೆಯ ಹಂಬಲದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇನೆ” ಎಂದು ತಿಳಿಸುವ ಮೂಲಕ ವದಂತಿಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.
ಆದರೆ, ರಾಜಕೀಯ ಪಡಸಾಲೆಯಲ್ಲಿ ಮಾತ್ರ ಮಮತಾ ಅವರ ಈ ಹೆಜ್ಜೆ ಕ್ಷೇತ್ರದ ಭವಿಷ್ಯದ ರಾಜಕೀಯ ಬದಲಾವಣೆಯ ಮುನ್ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ
