Tuesday, August 4, 2026
Homeರಾಜ್ಯಹೋರಾಟದ ಹೆಸರಿನಲ್ಲಿ ರಾಜಕೀಯ ಬೇಡ; ಅಧಿಕಾರಿಗಳು ನಿಯಮಾನುಸಾರ ಕಾರ್ಯನಿರ್ವಹಿಸಿ: ಶಾಸಕ ಅಪ್ಪಾಜಿ ನಾಡಗೌಡ ಸೂಚನೆ..!!!

ಹೋರಾಟದ ಹೆಸರಿನಲ್ಲಿ ರಾಜಕೀಯ ಬೇಡ; ಅಧಿಕಾರಿಗಳು ನಿಯಮಾನುಸಾರ ಕಾರ್ಯನಿರ್ವಹಿಸಿ: ಶಾಸಕ ಅಪ್ಪಾಜಿ ನಾಡಗೌಡ ಸೂಚನೆ..!!!

ಮುದ್ದೇಬಿಹಾಳ: ರೈತರ ಹೆಸರಿನಲ್ಲಿ ಹೋರಾಟದ ನೆಪವೊಡ್ಡಿ ರಾಜಕೀಯ ಮಾಡುವವರಿಗೆ ತಾಲೂಕಿನ ಅಧಿಕಾರಿಗಳು ಅನಗತ್ಯವಾಗಿ ಸ್ಪಂದಿಸುವ ಅಗತ್ಯವಿಲ್ಲ. ಸರ್ಕಾರಕ್ಕೆ ಉದ್ದೇಶಪೂರ್ವಕವಾಗಿ ಅಪಮಾನವಾಗುವ ರೀತಿಯ ಕೃತ್ಯಗಳು ನಡೆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ದಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಸಭಾಭವನದಲ್ಲಿ ಮಂಗಳವಾರ ನಡೆದ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೆಬಿಜೆಎನ್‌ಎಲ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕಾಲುವೆಗಳಿಗೆ ನೀರು ಹರಿಸಿ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗಿದೆ. ಆದರೆ ಕಾಲುವೆಗಳಿಂದ ಅಕ್ರಮವಾಗಿ ಪಂಪ್‌ಸೆಟ್‌ಗಳ ಮೂಲಕ ನೀರು ಎತ್ತಿಕೊಂಡಿದ್ದವರೇ ಇಂದು ಹೋರಾಟದ ಹೆಸರಿನಲ್ಲಿ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

“ಹೋರಾಟ ಮುದ್ದೇಬಿಹಾಳ ಕ್ಷೇತ್ರಕ್ಕೆ ಮಾತ್ರ ಏಕೆ?”

ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆ ಸಂಪೂರ್ಣ ಯಶಸ್ವಿಯಾಗಿಲ್ಲ. ಆದರೆ ಕೆಲವರು ರೈತರ ಪರ ಹೋರಾಟ ನಡೆಸುವ ಹೆಸರಿನಲ್ಲಿ ಮುದ್ದೇಬಿಹಾಳ ಕ್ಷೇತ್ರವನ್ನೇ ಗುರಿಯಾಗಿಸಿಕೊಂಡಿದ್ದಾರೆ. ಜಿಲ್ಲೆಯ ಇತರೆ ಭಾಗಗಳ ರೈತರ ಸಮಸ್ಯೆಗಳ ಕುರಿತು ಸಹ ಅದೇ ರೀತಿಯ ಹೋರಾಟ ನಡೆಸಿದರೆ ಅವರ ಉದ್ದೇಶ ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು. ಈ ವೇಳೆ ಇತ್ತೀಚೆಗೆ ಮೂಕಿಹಾಳ ಗ್ರಾಮದಲ್ಲಿ ಶಾಂತಗೌಡ ಪಾಟೀಲ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಪ್ರತಿಕ್ರಿಯಿಸಿದರು.

ಅಧಿಕಾರಿಗಳಿಗೆ ತರಾಟೆ:

ಹೋರಾಟ ನಡೆಸುವುದು ಪ್ರತಿಯೊಬ್ಬರ ಸಂವಿಧಾನಬದ್ಧ ಹಕ್ಕು. ಹೋರಾಟಕ್ಕೆ ಅಗತ್ಯ ಭದ್ರತೆ ಒದಗಿಸುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ. ಆದರೆ ಇತರ ಇಲಾಖೆಗಳ ಅಧಿಕಾರಿಗಳು ಪ್ರತಿಭಟನಾ ಸ್ಥಳದಲ್ಲಿ ಇಡೀ ದಿನ ಹಾಜರಿದ್ದು ಕಾಲ ಕಳೆಯುವ ಬದಲು, ಪ್ರೋಟೋಕಾಲ್ ಪ್ರಕಾರ ಸ್ಥಳಕ್ಕೆ ತೆರಳಿ ಮನವಿ ಸ್ವೀಕರಿಸಿ ತಮ್ಮ ಕರ್ತವ್ಯಕ್ಕೆ ಮರಳಬೇಕು ಎಂದು ಸೂಚಿಸಿದರು. ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ಸರ್ಕಾರಕ್ಕೆ ಅನಗತ್ಯ ಟೀಕೆ ಅಥವಾ ಅಪಕೀರ್ತಿ ಎದುರಾಗುವ ಸಂದರ್ಭಗಳು ಕಡಿಮೆಯಾಗುತ್ತವೆ. ಆದ್ದರಿಂದ ಪ್ರತಿಯೊಬ್ಬ ಅಧಿಕಾರಿಯೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ನಾಡಗೌಡ ತಿಳಿಸಿದರು.

ಹೆಚ್ಚಿನ ಸುದ್ದಿ