ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನ ತೃಪ್ತಿಕರ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮೆಚ್ಚುಗೆ
ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್ಗಾರ್ ಸೇರಿದಂತೆ ಪ್ರಮುಖ ಯೋಜನೆಗಳ ಪ್ರಗತಿ ಪರಿಶೀಲನೆ; ಕೇಂದ್ರದಿಂದ ಸಹಕಾರದ ಭರವಸೆ
ಬೆಂಗಳೂರು, ಜುಲೈ 6 : ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನವು ಸುಗಮವಾಗಿ ಸಾಗುತ್ತಿದ್ದು, ಯೋಜನೆಗಳ ಪರಿಣಾಮಕಾರಿ ಜಾರಿಗಾಗಿ ರಾಜ್ಯ ಸರ್ಕಾರದೊಂದಿಗೆ ನಿರಂತರ ಸಹಕಾರ ಮುಂದುವರಿಸಲಾಗುವುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ (MoRD) ಉನ್ನತ ಮಟ್ಟದ ಅಧಿಕಾರಿಗಳ ತಂಡ ತಿಳಿಸಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪ ಮಹಾನಿರ್ದೇಶಕರು (DDG) ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರಾದ ಶ್ರೀ ಅಲ್ತಾಫ್ ಹುಸೇನ್ ಹಾಜಿ* ನೇತೃತ್ವದ ತಂಡ ರಾಜ್ಯಕ್ಕೆ ಭೇಟಿ ನೀಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಶ್ರೀಮತಿ ದಿವ್ಯ ಪ್ರಭು, ಐಎಎಸ್ ಅವರೊಂದಿಗೆ ಸಭೆ ನಡೆಸಿ ‘ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್ಗಾರ್ (VB-GRAMG)’ ಯೋಜನೆಯ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಿತು. ತಂಡದಲ್ಲಿ ಗ್ರಾಮೀಣಾಭಿವೃದ್ದಿ ಮಂತ್ರಾಲಯದ ಅಧೀನ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಕೆ.ಸಿ ಹಾಗೂ ಗ್ರಾಮೀಣ ವಸತಿ ವಿಭಾಗದ ಸಹಾಯಕಕ ನಿರ್ದೇಶಕರಾದ ಬಲ್‌ದೇವ್ ಕುಮಾರ್ ವರ್ಮಾ ಉಪಸ್ಥಿತರಿದ್ದರು.
ಸಭೆಯಲ್ಲಿ ರಾಜ್ಯದಲ್ಲಿ ಯೋಜನೆಯ ಅನುಷ್ಠಾನ ನಿಗದಿತ ವೇಳಾಪಟ್ಟಿಯಂತೆ ಪ್ರಗತಿಯಲ್ಲಿದ್ದು, ಯಾವುದೇ ಪ್ರಮುಖ ಅಡಚಣೆಗಳಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಯೋಜನೆಯ ಅನುಷ್ಠಾನವನ್ನು ಇನ್ನಷ್ಟು ಸುಗಮಗೊಳಿಸಲು ಕೆಲವು ಆಡಳಿತಾತ್ಮಕ ಹಾಗೂ ಪ್ರಕ್ರಿಯಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಲಾಯಿತು.
ಬಳಿಕ ಪ್ರಧಾನ ಮಂತ್ರಿ ಆವಾಸ್ ಯೋಜನೆ–ಗ್ರಾಮೀಣ (PMAY-G), ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY), ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) ಹಾಗೂ ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ (NSAP) ಸೇರಿದಂತೆ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಗ್ರ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಯೋಜನೆಗಳ ಪ್ರಗತಿ, ಕೇಂದ್ರ–ರಾಜ್ಯ ಸಮನ್ವಯ, ಅನುಷ್ಠಾನದ ವೇಗ, ಮೇಲ್ವಿಚಾರಣಾ ವ್ಯವಸ್ಥೆ ಹಾಗೂ ಫಲಾನುಭವಿಗಳಿಗೆ ಸಮಯೋಚಿತವಾಗಿ ಯೋಜನೆಗಳ ಲಾಭ ತಲುಪಿಸುವ ಕುರಿತು ಸವಿಸ್ತಾರ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಚಿವಾಲಯದ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ತಾಂತ್ರಿಕ ನೆರವು, ಮೇಲ್ವಿಚಾರಣೆ ಹಾಗೂ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.
ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಇಲಾಖೆಗಳ ನಡುವಿನ ಸಮನ್ವಯ, ನಿರಂತರ ಮೇಲ್ವಿಚಾರಣೆ ಮತ್ತು ದತ್ತಾಂಶ ಆಧಾರಿತ ಆಡಳಿತ ವ್ಯವಸ್ಥೆ ಅತ್ಯಂತ ಅಗತ್ಯವೆಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ಈ ಯೋಜನೆಗಳ ಪರಿಣಾಮಕಾರಿ ಅನುಷ್ಠಾನವು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಉದ್ಯೋಗಾವಕಾಶಗಳ ವೃದ್ಧಿ, ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣ ಹಾಗೂ ‘ವಿಕಸಿತ ಭಾರತ–2047’ ಗುರಿ ಸಾಧನೆಯಲ್ಲಿ ಕರ್ನಾಟಕದ ಪಾತ್ರವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
