ಜಾತ್ರೆಯಲ್ಲಿ ಮಹಿಳೆಯ ಚಿನ್ನದ ಮಂಗಳಸೂತ್ರ ಕಿತ್ತು ಪರಾರಿಯಾಗಿದ್ದ ಮೂವರು ಆರೋಪಿಗಳ ಬಂಧನ
ಹಳಿಯಾಳ: ಜಾತ್ರಾ ಮಹೋತ್ಸವಕ್ಕೆ ತೆರಳಿದ್ದ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಹಳಿಯಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹4.50 ಲಕ್ಷ ಮೌಲ್ಯದ ಚಿನ್ನದ ಮಂಗಳಸೂತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ನ್ನು ವಶಪಡಿಸಿಕೊಳ್ಳಲಾಗಿದೆ.
ಅಮ್ಮನಕೊಪ್ಪ ಗ್ರಾಮದ ಅಕ್ಷತಾ ಮಂಜುನಾಥ ಕುಂಬಾರ (30) ಅವರು ಫೆ. 9ರಂದು ರಾತ್ರಿ 9 ಗಂಟೆ ಸುಮಾರಿಗೆ ತಮ್ಮ ಪತಿ ಹಾಗೂ ಮಗಳೊಂದಿಗೆ ಮುರ್ಕವಾಡದ ಜಾತ್ರಾ ಮಹೋತ್ಸವಕ್ಕೆ ತೆರಳಿದ್ದರು. ದೇವಿಯ ದರ್ಶನ ಪಡೆದ ಬಳಿಕ ಅಮ್ಯೂಸ್ಮೆಂಟ್ನಲ್ಲಿ ಆಟವಾಡಿ ವಾಪಸ್ ಬರುತ್ತಿದ್ದ ವೇಳೆ ಲೈಟ್ ಕಂಬದ ಬಳಿ ಅಪರಿಚಿತ ವ್ಯಕ್ತಿಯೊಬ್ಬರು ಅವರ ಕೊರಳಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದನು.
ಕಳುವಾದ ಮಂಗಳಸೂತ್ರದ ಮೌಲ್ಯವನ್ನು ದೂರಿನಲ್ಲಿ ₹1,75,885 ಎಂದು ನಮೂದಿಸಲಾಗಿತ್ತು. ಈ ಕುರಿತು ಅಕ್ಷತಾ ಅವರು ಹಳಿಯಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಪ್ರಕರಣದ ಪತ್ತೆಗಾಗಿ ಹಳಿಯಾಳ ಪೊಲೀಸರು ವಿಶೇಷ ಪತ್ತೆ ತಂಡವನ್ನು ರಚಿಸಿದ್ದರು. ತಂಡವು ವಿವಿಧ ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸಿ, ತಾಂತ್ರಿಕ ಮಾಹಿತಿ ಹಾಗೂ ಖಚಿತ ಸುಳಿವಿನ ಆಧಾರದ ಮೇಲೆ ಆ.8ರಂದು ಕಾರ್ಯಾಚರಣೆ ನಡೆಸಿತು.
ಹಳಿಯಾಳ ತಾಲೂಕಿನ ಕಾವಲವಾಡ ಹಾಗೂ ಹೊಸ ಹಡಗಲಿ ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದರು.
ಬಂಧಿತರನ್ನು ಹೊಸ ಹಡಗಲಿಯ ಶಶಿಧರ ಉಳವಪ್ಪ ಬಾರ್ಕಿ, ಕೆ.ಕೆ.ಹಳ್ಳಿಯ ಕಿರಣ ಧರ್ಮರಾಜ್ ಗೋಡಿಮನಿ ಹಾಗೂ ಹಳಿಯಾಳ ನಗರದ ಮಡ್ಡಿಯ ವಾಸಿಮ್ ಶಿರಾಜುದ್ದೀನ್ ಚವಾಣ್ ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಮಹಿಳೆಯ ಕೊರಳಿನಿಂದ 30 ಗ್ರಾಂ ತೂಕದ ಚಿನ್ನದ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಸುಮಾರು ₹4.50 ಲಕ್ಷ ಮೌಲ್ಯದ 30 ಗ್ರಾಂ ಚಿನ್ನದ ಮಂಗಳಸೂತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು ₹50 ಸಾವಿರ ಮೌಲ್ಯದ ಪ್ಯಾಶನ್ ಪ್ರೊ ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಪೊಲೀಸ್ ತಂಡದ ಕಾರ್ಯಾಚರಣೆ
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ದಾಂಡೇಲಿ ಪೊಲೀಸ್ ಉಪಾಧೀಕ್ಷಕ ಶಿವಾನಂದ ಮದರಕಂಡಿ ಅವರ ಮಾರ್ಗದರ್ಶನದಲ್ಲಿ, ಹಳಿಯಾಳ ಪೊಲೀಸ್ ವೃತ್ತ ನಿರೀಕ್ಷಕ ಜಯಪಾಲ್ ಪಾಟೀಲ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಹಳಿಯಾಳ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಗೌಡ ಅರಕೇರಿ ಹಾಗೂ ಪಿಎಸ್ಐ ಮಹೇಶ್ ಮಾಳಿ, ಭೀಮಪ್ಪ ಕೆದರಮಂಡಲಗಿ, ಶ್ರೀಶೈಲ್ ಜಿ.ಎಂ., ಲಕ್ಷ್ಮಣ ಪೂಜಾರಿ, ಅರವಿಂದ ಭಜಂತ್ರಿ, ಮಂಜುನಾಥ ಬಾಲಿ, ನಿಂಗಪ್ಪ ಬಳ್ಳಾರಿ, ವಿನೋದ್, ಬಸವರಾಜ್ ಚವಡಿ, ಬಸವರಾಜ್ ತ್ಯಾಪಿ, ಜೀಪ್ ಚಾಲಕರಾದ ಗಂಗಾಧರ ಹಾಗೂ ಉಮೇಶ್ ತೇಲಿ ಮತ್ತು ಕಾರವಾರ ತಾಂತ್ರಿಕ ವಿಭಾಗದ ಸಿಬ್ಬಂದಿ ಉದಯ ಗುನಗಾ ಅವರು ಆರೋಪಿಗಳ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
