Tuesday, August 4, 2026
Homeರಾಜ್ಯ14ನೇ ರಾಜ್ಯ ರೈಫಲ್ ಚಾಂಪಿಯನ್‌ಶಿಪ್‌ನಲ್ಲಿ ವಿಜಯಪುರಕ್ಕೆ ಬೆಳ್ಳಿ ಪದಕ..!!!

14ನೇ ರಾಜ್ಯ ರೈಫಲ್ ಚಾಂಪಿಯನ್‌ಶಿಪ್‌ನಲ್ಲಿ ವಿಜಯಪುರಕ್ಕೆ ಬೆಳ್ಳಿ ಪದಕ..!!!

ವಿಜಯಪುರ: ಬೆಂಗಳೂರಿನ ಸರ್ಕಾರಿ ಸಾಯಿ ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್‌, ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ 14ನೇ ರಾಜ್ಯ ಶೂಟಿಂಗ್ ಕ್ರೀಡಾ ಸ್ಪರ್ಧೆ ಹಾಗೂ ಚಾಂಪಿಯನ್‌ಶಿಪ್ನಲ್ಲಿ ವಿಜಯಪುರ ಜಿಲ್ಲೆಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

ಮಾಸ್ಟರ್ಸ್ ವಿಭಾಗದ 10 ಮೀಟರ್ ಗ್ರೂಪ್ ಇವೆಂಟ್ (ಓಪನ್ ಸೈಟ್) ಸ್ಪರ್ಧೆಯಲ್ಲಿ ವಿಜಯಪುರ ಜಿಲ್ಲಾ ರೈಫಲ್ ಅಸೋಸಿಯೇಷನ್‌ನಿಂದ ಭಾಗವಹಿಸಿದ್ದ ಗೌರವ್ ದರ್ಬಾರ್ ಹಾಗೂ ಪ್ರೇಮಾನಂದ ನಗರೇಶ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈ ಕುರಿತು ಮಾತನಾಡಿದ ಜಿಲ್ಲಾ ರೈಫಲ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ ಕಾರಜೋಳ, ರೈಫಲ್ ಶೂಟಿಂಗ್ ಕ್ರೀಡೆಯ ಬಗ್ಗೆ ಯುವಜನರಲ್ಲಿ ದಿನದಿಂದ ದಿನಕ್ಕೆ ಆಸಕ್ತಿ ಹೆಚ್ಚುತ್ತಿದ್ದು, ವಿಜಯಪುರ ಜಿಲ್ಲೆಯಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರತಿಭಾವಂತ ಶೂಟರ್‌ಗಳನ್ನು ಬೆಳೆಸುವ ಉದ್ದೇಶದಿಂದ ಜಿಲ್ಲಾ ರೈಫಲ್ ಅಸೋಸಿಯೇಷನ್‌ ಕಾರ್ಯನಿರ್ವಹಿಸುತ್ತಿದೆ. ಮೊದಲ ಪ್ರಯತ್ನದಲ್ಲೇ ಜಿಲ್ಲೆಯ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ಬೆಳ್ಳಿ ಪದಕ ಗೆದ್ದು ಜಿಲ್ಲೆಗೆ ಹೆಮ್ಮೆ ತಂದಿರುವುದು ಸಂತಸದ ವಿಷಯ ಎಂದು ಹೇಳಿದರು.

ವಿಜೇತರಿಗೆ ಸನ್ಮಾನ

ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಇಬ್ಬರು ಕ್ರೀಡಾಪಟುಗಳನ್ನು ವಿಜಯಪುರ ಜಿಲ್ಲಾ ರೈಫಲ್ ಅಸೋಸಿಯೇಷನ್ ವತಿಯಿಂದ ವಿಜಯಪುರದ ರೋಟರಿ ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ರೈಫಲ್ ಅಸೋಸಿಯೇಷನ್ ಉಪಾಧ್ಯಕ್ಷ ಶಿವಕುಮಾರ ಶಾರದಳ್ಳಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ