Monday, August 3, 2026
Homeರಾಜ್ಯಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆ: ವಿಜಯಪುರ ಜಿಲ್ಲೆಯಲ್ಲಿ ಸಚಿವ ಸ್ಥಾನದ ಕಗ್ಗಂಟು...!!! ...

ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆ: ವಿಜಯಪುರ ಜಿಲ್ಲೆಯಲ್ಲಿ ಸಚಿವ ಸ್ಥಾನದ ಕಗ್ಗಂಟು…!!! 6 ಬಾರಿ ಶಾಸಕರಾದ ಅಪ್ಪಾಜಿಗೆ ಅವಕಾಶ ಸಿಗುತ್ತದೆಯೇ? ಹೊಸ ಮುಖಗಳಿಗೆ ಮಣೆ ಹಾಕುತ್ತದೆಯೇ ಹೈಕಮಾಂಡ್?

ಬೆಂಗಳೂರು: (ವಿಶೇಷ ವರದಿ: ಚೇತನ ಕೆಂದೂಳಿ)

ರಾಜ್ಯದಲ್ಲಿ ಎರಡನೇ ಅವಧಿಯ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆ ರಾಜಕೀಯವಾಗಿ ಕುತೂಹಲ ಕೆರಳಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ಹಂಚಿಕೆ ಹಲವು ಜಿಲ್ಲೆಗಳಲ್ಲಿ ಸಮತೋಲನ ಸಾಧಿಸುವ ಸವಾಲಾಗಿ ಪರಿಣಮಿಸಿದ್ದು, ವಿಜಯಪುರ ಜಿಲ್ಲೆಯಲ್ಲಿಯೂ ತೀವ್ರ ಪೈಪೋಟಿ ನಿರ್ಮಾಣವಾಗಿದೆ.

ಮೊದಲ ಅವಧಿಯ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಬೆಂಬಲಿಗರಿಗೆ ಸಚಿವ ಸ್ಥಾನ ಕಲ್ಪಿಸುವ ಪ್ರಯತ್ನ ಒಂದೆಡೆಯಾದರೆ, ಮತ್ತೊಂದೆಡೆ ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬ ಹೈಕಮಾಂಡ್‌ನ ನಿರೀಕ್ಷೆಯೂ ಇದೆ ಎನ್ನುವ ರಾಜಕೀಯ ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ಚುನಾವಣಾ ಸಂದರ್ಭದಲ್ಲಿ ನೀಡಿದ ರಾಜಕೀಯ ಭರವಸೆಗಳನ್ನು ಉಳಿಸಿಕೊಳ್ಳಬೇಕೇ ಅಥವಾ ಹೊಸ ನಾಯಕತ್ವಕ್ಕೆ ಆದ್ಯತೆ ನೀಡಬೇಕೇ ಎಂಬ ದ್ವಂದ್ವವೂ ಪಕ್ಷದೊಳಗೆ ಇದೆ ಎಂಬ ವಿಶ್ಲೇಷಣೆಗಳು ವ್ಯಕ್ತವಾಗುತ್ತಿವೆ.

ವಿಜಯಪುರ ಜಿಲ್ಲೆಯಲ್ಲಿ ಮೂವರು ಪ್ರಬಲ ಆಕಾಂಕ್ಷಿಗಳು

ವಿಜಯಪುರ ಜಿಲ್ಲೆಗೆ ಈಗಾಗಲೇ ಎಂ.ಬಿ. ಪಾಟೀಲ ಸಚಿವರಾಗಿದ್ದಾರೆ. ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ದೊರೆತರೆ ಅದು ಯಾರ ಪಾಲಾಗಲಿದೆ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಒಂದೆಡೆ ಹಲವು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಬಬಲೇಶ್ವರ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ ಇದ್ದರೆ, ಮತ್ತೊಂದೆಡೆ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಇದ್ದಾರೆ. ಇದರ ಜೊತೆಗೆ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಕೂಡ ಮೊದಲ ಬಾರಿಗೆ ಸಚಿವ ಸಂಪುಟ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದಾರೆ.

ಈ ಮೂವರು ನಾಯಕರ ಹೆಸರುಗಳು ಸಚಿವ ಸ್ಥಾನದ ರೇಸ್‌ನಲ್ಲಿ ಕೇಳಿಬರುತ್ತಿದ್ದು, ಜಿಲ್ಲೆಯ ಕಾಂಗ್ರೆಸ್ ರಾಜಕೀಯದಲ್ಲಿ ಸಹಜ ಕುತೂಹಲ ಮೂಡಿಸಿದೆ.

ಅಪ್ಪಾಜಿ ಪರ ಅನುಭವದ ಅಂಶ

ಶಿವಾನಂದ ಪಾಟೀಲ ಅವರು ಈಗಾಗಲೇ ಹಲವು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಸಿ.ಎಸ್. ನಾಡಗೌಡ (ಅಪ್ಪಾಜಿ) ಅವರು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಸಂಪುಟದಲ್ಲಿ ಒಮ್ಮೆ ಸಚಿವರಾಗಿದ್ದು, ಬಳಿಕ ಹಲವು ಬಾರಿ ಶಾಸಕರಾಗಿ ಆಯ್ಕೆಯಾದರೂ ಮತ್ತೆ ಸಚಿವ ಸ್ಥಾನ ದೊರೆತಿಲ್ಲ.

ಇನ್ನೊಂದೆಡೆ ಯಶವಂತರಾಯಗೌಡ ಪಾಟೀಲ ಅವರು ಈ ಇಬ್ಬರು ನಾಯಕರಿಗಿಂತ ಕಿರಿಯ ರಾಜಕೀಯ ಮುಖವಾಗಿದ್ದು, ಅವರಿಗೆ ಅವಕಾಶ ದೊರೆತರೆ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮುದ್ದೇಬಿಹಾಳ ಕ್ಷೇತ್ರದ ರಾಜಕೀಯ ಮಹತ್ವ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರವು ಒಂದು ಕಾಲದಲ್ಲಿ ಜನತಾದಳದ ಭದ್ರಕೋಟೆಯೆಂದು ಪರಿಗಣಿಸಲಾಗುತ್ತಿತ್ತು. ಆ ಕ್ಷೇತ್ರವನ್ನು ಕಾಂಗ್ರೆಸ್ ಪರವಾಗಿ ಬಲಪಡಿಸುವಲ್ಲಿ ಸಿ.ಎಸ್. ನಾಡಗೌಡ ಅವರ ಪಾತ್ರ ಪ್ರಮುಖವಾಗಿದೆ ಎಂಬ ಅಭಿಪ್ರಾಯವನ್ನು ಅವರ ಬೆಂಬಲಿಗರು ವ್ಯಕ್ತಪಡಿಸುತ್ತಾರೆ.

2023ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು ಎಂದು ಅವರ ಬೆಂಬಲಿಗರು ಹೇಳುತ್ತಾರೆ. ಈ ಕಾರಣದಿಂದಲೂ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಅವಕಾಶ ಸಿಗಬಹುದೇ ಎಂಬ ನಿರೀಕ್ಷೆ ಕ್ಷೇತ್ರದಲ್ಲಿ ವ್ಯಕ್ತವಾಗಿದೆ.

ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ

ಸಿ.ಎಸ್. ನಾಡಗೌಡ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ನಿಷ್ಠಾವಂತ ನಾಯಕರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ. ಅವರ ಬೆಂಬಲಿಗರ ಪ್ರಕಾರ, ಈ ಹಿಂದಿನ ಹಲವು ಸಚಿವ ಸಂಪುಟ ವಿಸ್ತರಣೆಗಳ ಸಂದರ್ಭದಲ್ಲಿಯೂ ಅವರ ಹೆಸರು ಚರ್ಚೆಯಲ್ಲಿದ್ದರೂ ಅಂತಿಮ ಹಂತದಲ್ಲಿ ಅವಕಾಶ ಕೈತಪ್ಪಿದೆ. ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ಅವರ ರಾಜಕೀಯ ಬದುಕಿನಲ್ಲಿ ಮಹತ್ವದ ಘಟ್ಟವಾಗಲಿದೆಯೇ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ವಿಜಯಪುರ ಜಿಲ್ಲೆಯಲ್ಲಿ ಅನುಭವಕ್ಕೆ ಮನ್ನಣೆ ಸಿಗುತ್ತದೆಯೇ, ಪ್ರಾದೇಶಿಕ ಸಮತೋಲನಕ್ಕೆ ಆದ್ಯತೆ ನೀಡಲಾಗುತ್ತದೆಯೇ ಅಥವಾ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗುತ್ತದೆಯೇ ಎಂಬುದರತ್ತ ರಾಜಕೀಯ ವಲಯದ ಚಿತ್ತ ನೆಟ್ಟಿದೆ.

ಹೆಚ್ಚಿನ ಸುದ್ದಿ