ಚಿತ್ರನಟ ಸುದೀಪ್ ಬುಧವಾರ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿದೆ. ಇದರ ಬೆನ್ನಲ್ಲೇ ನಟ ಸುದೀಪ್ ರ ಖಾಸಗಿ ವಿಡಿಯೋಗಳನ್ನು ಹರಿಬಿಡುವುದಾಗಿ ಬೆದರಿಕೆ ಒಡ್ಡಿರುವ ಎರಡು ಪತ್ರಗಳು ಸುದೀಪ್ ನಿವಾಸಕ್ಕೆ ಅಂಚೆಮೂಲಕ ರವಾನಿಸಲ್ಪಟ್ಟಿದೆ.
ಮಂಗಳವಾರದಿಂದ ನಟ ಸುದೀಪ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ, ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಏ. 5 ರಂದು ಪಕ್ಷ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂಬ ಸುದ್ದಿಗಳು ಹರಿದಾಡತೊಡಗಿತ್ತು. ಈ ಬಗ್ಗೆ ಇದುವರೆಗೂ ಸಿಎಂ ಅಥವಾ ಸುದೀಪ್ ಆಗಲಿ ಸ್ಪಷ್ಟೀಕರಣ ನೀಡಿಲ್ಲ. ಆದರೆ ಮಾ. 29 ರಂದು ಜೆಪಿ ನಗರದ ಬಳಿಯಿರುವ ಸುದೀಪ್ ನಿವಾಸಕ್ಕೆ ಎರಡು ಬೆದರಿಕೆ ಪತ್ರಗಳು ತಲುಪಿವೆ. ಈ ಪತ್ರಗಳ ಅನಾಮಧೇಯ ಪತ್ರಗಳಾಗಿದ್ದು, ಸುದೀಪ್ ತಂದೆತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಜೊತೆಗೆ ನಿಮ್ಮ ವಿಡಿಯೋ ಬಿಡುಗಡೆ ಮಾಡುತ್ತೇವೆಂದು ಬೆದರಿಕೆಯೊಡ್ಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಡಿ.ಕೆ ಶಿವಕುಮಾರ್ ಹಾಗೂ ಬಸವರಾಜ ಬೊಮ್ಮಾಯಿ ಇಬ್ಬರೂ ಪ್ರತ್ಯೇಕವಾಗಿ ಸುದೀಪ್ ರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.
ಸುದೀಪ್ ಆಪ್ತರಾದ ಜಾಕ್ ಮಂಜು ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
