ಹುಬ್ಬಳ್ಳಿ: ಬಿಜೆಪಿ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಶುರುವಾಗುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ರೋಚಕ ಬೆಳವಣಿಗೆಗಳು ನಡೆಯಲಾರಂಭಿಸಿದೆ. ಹೈಕಮ್ಯಾಂಡ್ ಟಿಕೆಟ್ ಕೊಡಲಿ ಬಿಡಲಿ ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುವುದಂತೂ ಶತಸಿದ್ದ ಎಂದು ಮಾಜಿ ಡಿಸಿಎಂ ಜಗದೀಶ್ ಶೆಟ್ಟರ್ ಘೋಷಿಸಿದ್ದಾರೆ.
ಈಗಾಗಲೇ ಕೆ.ಎಸ್.ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದಂತೆಯೇ ಈ ಬಾರಿ ಹಲವು ಮಂದಿ ಹಿರಿಯ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್ ಸಿಗುವುದು ಸಂಶಯ ಎಂಬ ಸುದ್ದಿ ಹರಿದಾಡಲಾರಂಭಿಸಿತ್ತು. ಕೂಡಲೇ ಈ ಬಗ್ಗೆ ಸ್ವತಃ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದ್ದು, ಇದುವರೆಗೂ ನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಆದರೆ ಬೆಳಗ್ಗೆ ಹೈಕಮ್ಯಾಂಡ್ ಕರೆ ಮಾಡಿ ಹೊಸಬರಿಗೆ ಅವಕಾಶ ನೀಡಿ ಎಂದರು. ಟಿಕೆಟ್ ಕೈತಪ್ಪುವುದಕ್ಕೆ ಕಾರಣವೇನೆಂದು ನನಗೂ ತಿಳಿಯಬೇಕಿದೆ. ಮೂವತ್ತು ವರ್ಷ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷ ನೀಡಿದ ಹಲವು ಜವಾಬ್ದಾರಿ ನಿರ್ವಹಿಸಿದ್ದೇನೆ. ಕ್ಷೇತ್ರದ ಜನತೆಯ ಆಶೀರ್ವಾದ ನನ್ನ ಮೇಲಿದೆ. ಇವೆಲ್ಲವನ್ನೂ ಬಿಜೆಪಿ ವರಿಷ್ಠರು ಪರಿಗಣಿಸುತ್ತಾರೆಂದು ಭಾವಿಸಿದ್ದೇನೆ. ಚುನಾವಣೆಗೆ ನಿಲ್ಲಬಾರದು ಎಂದು ಮೂರು ತಿಂಗಳ ಹಿಂದೆಯೇ ಹೇಳಬಹುದಿತ್ತು ಎಂದಿದ್ದಾರೆ.
ವರಿಷ್ಠರ ನಿರ್ಧಾರಕ್ಕೆ ನನ್ನ ಒಪ್ಪಿಗೆಯಿಲ್ಲ. ಪಕ್ಷದ ವರಿಷ್ಠರು ಇನ್ನೊಮ್ಮೆ ಚರ್ಚಿಸುವುದಾಗಿ ಹೇಳಿದ್ದಾರೆ ಎಂದ ಜಗದೀಶ್ ಶೆಟ್ಟರ್ ಆದರೆ ಬಿಜೆಪಿ ಟಿಕೆಟ್ ನೀಡಲಿ ಬಿಡಲಿ ನಾನು ಸ್ಪರ್ಧಿಸುವುದಂತೂ ನಿಜ ಎನ್ನುವ ಮೂಲಕ ಬಂಡಾಯದ ಸುಳಿವನ್ನು ನೀಡಿದ್ದಾರೆ.
ಆರು ಬಾರಿ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದ ಜಗದೀಶ್ ಶೆಟ್ಟರ್ ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ಕೈಗಾರಿಕಾ ಸಚಿವ ಸೇರಿದಂತೆ ಹಲವು ಹುದ್ದೆಗಳನ್ನು ಬಿಜೆಪಿಯಲ್ಲಿ ನಿರ್ವಹಿಸಿದ್ದರು.
