Friday, March 6, 2026
Homeಚುನಾವಣೆ 2023ಅಶೋಕ್ ಬಂದು ಮಿಲ್ಟ್ರಿ ಹೋಟೇಲ್‌ನಲ್ಲಿ ಊಟ ಮಾಡಿಕೊಂಡು ಹೋಗಲಿ : ಡಿಕೆಶಿ

ಅಶೋಕ್ ಬಂದು ಮಿಲ್ಟ್ರಿ ಹೋಟೇಲ್‌ನಲ್ಲಿ ಊಟ ಮಾಡಿಕೊಂಡು ಹೋಗಲಿ : ಡಿಕೆಶಿ

ಬೆಂಗಳೂರು: ಕನಕಪುರದಲ್ಲಿ ತಮ್ಮ ವಿರುದ್ಧ ಆರ್. ಅಶೋಕ್ ಬಿಜೆಪಿಯಿಂದ ಕಣಕ್ಕೆ ಇಳಿಯುತ್ತಿರುವುದರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಪ್ರತಿಕ್ರಿಯೆ ನೀಡಿದ್ದಾರೆ. ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನಕಪುರಕ್ಕೆ ಸಾಮ್ರಾಟ್ ಅಶೋಕ್ ಬರುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮ್ರಾಟ್ ಆದರೂ ಬರಲಿ ಚಕ್ರವರ್ತಿಯಾದರೂ ಬರಲಿ ಅಥವಾ ಕಾರ್ಯಕರ್ತರಾದರೂ ಬರಲಿ ಅದರಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ. ಅತಿಥಿ ಸತ್ಕಾರಕ್ಕೆ ಕನಕಪುರ ಪ್ರಖ್ಯಾತವಾಗಿದೆ. ಅಲ್ಲಿ ಒಳ್ಳೊಳ್ಳೆಯ ಮಿಲ್ಟ್ರಿ ಹೋಟೆಲ್‌ಗಳಿವೆ. ಅಶೋಕ್ ಬಂದು ಊಟ ಮಾಡಿಕೊಂಡು ಹೋಗಬಹುದು ಎಂದು ಟಾಂಗ್ ನೀಡಿದ್ದಾರೆ. ಜೊತೆಗೆ, ಬಿಜೆಪಿಯವರು ಯುಪಿ ಮಾಡೆಲ್ ಆದರೂ ಮಾಡಲೀ, ಗುಜರಾತ್ ಮಾಡೆಲ್ ಆದರೂ ಮಾಡಲೀ ಅವರಿಗೆ ಶುಭವಾಗಲಿ ಎಂದು ಡಿಕೆಶಿ ನುಡಿದಿದ್ದಾರೆ.
ನಾನು ಕೇವಲ ನಾಮಪತ್ರ ಸಲ್ಲಿಸುವ ದಿನ ಮತ್ತು ಇನ್ನೊಂದು ದಿನ ಹೋಗಿ ಪ್ರಚಾರ ನಡೆಸುತ್ತೇನೆ. ನನ್ನನ್ನು ಹಾಗೂ ಸಿದ್ದರಾಮಯ್ಯನವರನ್ನು ಕಂಡರೆ ಬಿಜೆಪಿ ಗಡಗಡನೆ ನಡುಗುತ್ತಿದೆ. ಅವರು ಏನಾದರೂ ತಂತ್ರ ಮಾಡಲಿ, ತಂತ್ರಗಾರಿಕೆಯಲ್ಲಿ ನಾವೂ ಹಿಂದುಳಿದಿಲ್ಲ ಎಂದು ಡಿ.ಕೆ. ಉತ್ತರಿಸಿದರು.
ಕಳೆದ ಮೂರ್ನಾಲ್ಕು ವರ್ಷಗಳಿಂದ ಇಡಿ, ಐಟಿ, ಸಿಬಿಐ ಪ್ರಕರಣಗಳ ಮೂಲಕ ನನಗೆ ನಿತ್ಯ ಕಿರುಕುಳ ನೀಡುತ್ತಲೇ ಇದ್ದಾರೆ ಎಂದು ಆರೋಪಿಸಿದ ಡಿ.ಕೆ.ಶಿವಕುಮಾರ್, ರಾಜ್ಯದ ಜನತೆ ನನಗೆ ಬೆಂಬಲವಾಗಿದ್ದಾರೆ ಎಂದರು.

ಹೆಚ್ಚಿನ ಸುದ್ದಿ