ಚಿತ್ರದುರ್ಗ: ಸರ್ಕಾರಿ ನೌಕರರಾಗಿದ್ದುಕೊಂದು ಬಿಜೆಪಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಆರೋಪದ ಮೇಲೆ ಐದು ಮಂದಿ ಪೊಲೀಸ್ ಸಿಬ್ಬಂದಿಯನ್ನು ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಿರುವ ಘಟನೆ, ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ. ಈ ಸಿಬ್ಬಂದಿ ವಿರುದ್ಧ ಕಾಂಗ್ರೆಸ್ ತಾಲ್ಲೂಕು ಬ್ಲಾಕ್ ಸಮಿತಿ ಮುಖಂಡರು ಚುನಾವಣಾಧಿಕಾರಿಗಳ ಬಳಿ ದೂರು ಸಲ್ಲಿಸಿದ್ದರು. ಈ ದೂರನ್ನು ಪರಿಶೀಲಿಸಿ ಚುನವಣಾ ಆಯೋಗ ಕ್ರಮ ಕೈಗೊಂಡಿದೆ.
ಹಿರಿಯೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆ. ಶಿವಮೂರ್ತಿ, ಮೊಹಮ್ಮದ್ ಫೀರ್ದೋಸ್, ತಿಮ್ಮೇಶ.ಡಿ, ತಿಮ್ಮರಾಯಪ್ಪ ಹಾಗೂ ಮೌನೇಶ್ವರ ವರ್ಗಾವಣೆಯಾದ ಸರ್ಕಾರಿ ಸಿಬ್ಬಂದಿಗಳಾಗಿದ್ದಾರೆ. ಕ್ರಮವಾಗಿ ಮೊದಲಿಬ್ಬರು ಹೆಡ್ ಕಾನ್ಸ್‌ಟೇಬಲ್ ಹಾಗೂ ಉಳಿದವರು ಕಾನ್ಸ್‌ಟೇಬಲ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದ, ಇವರನ್ನು ಭರಮಸಾಗರ, ಚಳ್ಳಕೆರೆ, ಹೊಸದುರ್ಗ, ಮೊಳಕಾಲ್ಮೂರು ಠಾಣೆಗಳಿಗೆ ವರ್ಗಾಯಿಸಲಾಗಿದೆ.
ಇವರು ಬಿಜೆಪಿ ಪರವಾಗಿ ಏಕಪಕ್ಷೀಯವಾಗಿ ಪ್ರಚಾರ ಮಾಡುವುದು, ಸಾರ್ವಜನಿಕರಿಗೆ ಬೆದರಿಕೆ ಹಾಕುವುದು ಮುಂತಾದ ಕಾರ್ಯಗಳಲ್ಲಿ ನಿರತರಾಗಿದ್ದಾರೆಂದು ಕಾಂಗ್ರೆಸ್ ಆರೋಪಿಸಿತ್ತು.

