ಮಂಗಳೂರು: ಜಗದೀಶ್ ಶೆಟ್ಟರ್ ಅವರಂಥ ದೊಡ್ಡ ನಾಯಕರ ಅವಶ್ಯಕತೆ ನಮ್ಮ ಪಕ್ಷಕ್ಕೆ ಇಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ನುಡಿದಿದ್ದಾರೆ. ಬಿಜೆಪಿ ಶೆಟ್ಟರ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮದು ಸಣ್ಣ ಪಕ್ಷ. ದೊಡ್ಡ ನಾಯಕರ ಬಗ್ಗೆ ನಿರೀಕ್ಷೆಯಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದರು.
ಜಗದೀಶ್ ಶೆಟ್ಟರ್ ನಮ್ಮೊಡನೆ ಸಂಪರ್ಕದಲ್ಲಿ ಇಲ್ಲ. ಅಂಥಾ ದೊಡ್ಡ ನಾಯಕರನ್ನು ನಮ್ಮ ಪಕ್ಷ ಸೇರಿಸಿಕೊಳ್ಳಲು ಸಾಧ್ಯವೂ ಇಲ್ಲ. ಸಣ್ಣಪುಟ್ಟವರು ಬಂದರೆ ಸೇರಿಸಿಕೊಳ್ಳಬಹುದು ಎಂದ ಎಚ್‌ಡಿಕೆ, ಶೆಟ್ಟರ್ ಅವರ ರಾಜೀನಾಮೆ ಬಿಜೆಪಿ ಆಂತರಿಕ ವಿಚಾರ. ಜನಸಂಘದ ಕಾಲದಿಂದಲೂ ಬಿಜೆಪಿಗಾಗಿ ದುಡಿದ ಹಿರಿಯ ರಾಜಕಾರಣಿ ಅವರು, ಅಂಥವರೇ ಇಂದು ಬಿಜೆಪಿ ತೊರೆಯುವ ತೀರ್ಮಾನಕ್ಕೆ ಬಂದಿದ್ದಾರೆ. ಹಿಂದೊಮ್ಮೆ ಬಿಜೆಪಿಯಲ್ಲಿ ಡಿಎನ್‌ಎ ಎಷ್ಟು ಮುಖ್ಯ ಎಂದು ನಾನು ಹೇಳಿಕೆ ನೀಡಿದ್ದು, ಇಂದು ಬಿಜೆಪಿಯ ಚಟುವಟಿಕೆಗಳು ಅದಕ್ಕೆ ಪೂರಕವಾಗಿದೆ ಎಂದು ಲೇವಡಿ ಮಾಡಿದರು.
