ಇಂದೋರ್: ಕೋವಿಡ್ 19 ವೈರಸ್ ಗೆ ತುತ್ತಾಗಿ ಮೃತಪಟ್ಟಿದ್ದರು ಎನ್ನಲಾದ ವ್ಯಕ್ತಿಯೊಬ್ಬರು 2 ವರ್ಷಗಳ ನಂತರ ಮತ್ತೆ ಕುಟುಂಬಸ್ಥರ ಮುಂದೆ ಪ್ರತ್ಯಕ್ಷವಾದ ಘಟನೆ ನಡೆದಿದೆ.
ಮಧ್ಯಪ್ರದೇಶದ ಧಾರ್ ಜಿಲ್ಲೆ ಈ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ.
2021ರಲ್ಲಿ ಕಮಲೇಶ್ ಪಾಟಿದಾರ್ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ‘ವೈದ್ಯರು‘ ನಂತರ ಕಮಲೇಶ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಮೃತದೇಹ ಮನೆಗೆ ತೆಗೆದುಕೊಂಡು ಹೋದ ಕುಟುಂಬಸ್ಥರು ಅಂತಿಮ ಸಂಸ್ಕಾರ ನಡೆಸಿದ್ದಾರೆ.
ಇದೀಗ 2 ದಿನಗಳ ಮೊದಲು ಕಮಲೇಶ್ ಪಾಟಿದಾರ್ ತನ್ನ ಸಂಬಂಧಿಕರ ಮನೆಗೆ ತೆರಳಿ ಎಲ್ಲರನ್ನು ಆಶ್ಚರ್ಯಕ್ಕೀಡು ಮಾಡಿದ್ದಾರೆ.
“ಈಗ, ಅವರು ಮನೆಗೆ ಮರಳಿದ್ದಾರೆ. ಆದರೆ ಈ ಅವಧಿಯಲ್ಲಿ ಅವರು ಎಲ್ಲಿಗೆ ಹೋಗಿದ್ದರು ಎಂಬುದರ ಕುರಿತು ಏನೂ ಹೇಳಿಲ್ಲ’’ ಎಂದು ಕಮಲೇಶ್ ಸಂಬಂಧಿ ಮಾಹಿತಿ ನೀಡಿದ್ದಾರೆ.
