ಬೆಂಗಳೂರು: ಕಾಂಗ್ರೆಸ್ ಟಿಕೆಟ್ ವಂಚಿತ ಅಭ್ಯರ್ಥಿ ಕೆಜಿಎಫ್ ಬಾಬು ಮನೆಯ ಮೇಲೆ ಬುಧವಾರ ಮುಂಜಾನೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೈಗ್ರೌಂಡ್ಸ್ ಬಳಿಯಿರುವ ರುಕ್ಸಾನಾ ಪ್ಯಾಲೇಸ್ ನಿವಾಸದ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಆದಾಯ ತೆರಿಗೆ ವಂಚನೆ ಆರೋಪದ ಮೇಲೆ ಕೆಜಿಎಫ್ ಬಾಬು ಮನೆಯ ಮೇಲೆ ಐಟಿದಾಳಿ ನಡೆದಿರುವುದಾಗಿ ತಿಳಿದುಬಂದಿದೆ. ಕೆಜಿಎಫ್ ಬಾಬು ಮನೆ ಮತ್ತು ಕಚೇರಿ ಮಾತ್ರವಲ್ಲದೇ, ರಾಜಧಾನಿಯ ಐವತ್ತು ಬೇರೆ ಬೇರೆ ಸ್ಥಳಗಳಲ್ಲೂ ಸಹ ಐಟಿ ದಾಳಿ ನಡೆಸಲಾಗಿದೆ. ಕಳೆದ ಪರಿಷತ್ ಚುನಾವಣೆಯಲ್ಲಿ ಕೆಜಿಎಫ್ ಬಾಬು ತಾವು 1700 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಸ್ವಯಂ ಘೋಷಣೆ ಮಾಡಿಕೊಂಡಿದ್ದರು.
ಕೆಜಿಎಫ್ ಬಾಬು ಪತ್ನಿ ಶಾಝಿಯಾ ತರ್ನುಮ್ ಈ ಬಾರಿ ಚಿಕ್ಕಪೇಟೆಯಿಂದ ಸ್ಪರ್ಧಿಸುತ್ತಿದ್ದು, ಅವರೂ ಸಹ ತಾವು 1600 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
