Monday, March 2, 2026
Homeವಿದೇಶಇರಾನ್ ಪರಮೋಚ್ಚ ನಾಯಕ ಅಲಿ ಖಮೇನಿ ಸಾವು: ದೃಢಪಡಿಸಿದ ಡೊನಾಲ್ಡ್ ಟ್ರಂಪ್ !

ಇರಾನ್ ಪರಮೋಚ್ಚ ನಾಯಕ ಅಲಿ ಖಮೇನಿ ಸಾವು: ದೃಢಪಡಿಸಿದ ಡೊನಾಲ್ಡ್ ಟ್ರಂಪ್ !

ತೆಹ್ರಾನ್/ವಾಷಿಂಗ್ಟನ್: ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (86) ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಖಮೇನಿ ಅವರ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಿಂದ ನಿಗೂಢ ಪೋಸ್ಟ್ ಒಂದು ಪ್ರಕಟವಾಗಿದ್ದು, ಜಗತ್ತಿನಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ

ಟ್ರಂಪ್ ಹೇಳಿದ್ದೇನು?

ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಸುದೀರ್ಘ ಸಂದೇಶ ಬರೆದಿರುವ ಡೊನಾಲ್ಡ್ ಟ್ರಂಪ್, ಖಮೇನಿ ಸಾವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.ಖಮೇನಿ ಇತಿಹಾಸದ ಅತ್ಯಂತ ದುಷ್ಟ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರ ಅಂತ್ಯವಾಗಿದೆ,” ಎಂದು ಟ್ರಂಪ್ ಹೇಳಿದ್ದಾರೆ.

ಇದು ಕೇವಲ ಇರಾನ್ ಜನರಿಗೆ ಸಂದ ಜಯವಲ್ಲ, ಬದಲಾಗಿ ಖಮೇನಿ ಮತ್ತು ಅವರ ಗೂಂಡಾ ಪಡೆಯಿಂದ ಹತ್ಯೆಗೀಡಾದ ಅಮೆರಿಕನ್ನರು ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳ ಜನರಿಗೆ ಸಂದ ನ್ಯಾಯವಾಗಿದೆ,” ಎಂದು ಅವರು ಬಣ್ಣಿಸಿದ್ದಾರೆ.ಇಸ್ರೇಲ್ ಜೊತೆಗೂಡಿ ನಡೆಸಿದ ಈ ಅತ್ಯಂತ ಅತ್ಯಾಧುನಿಕ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು ಖಮೇನಿಗೆ ಸಾಧ್ಯವಾಗಲಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.

ಖಮೇನಿ ಖಾತೆಯಿಂದ ನಿಗೂಢ ಪೋಸ್ಟ್

ಟ್ರಂಪ್ ಅವರು ಸಾವಿನ ಸುದ್ದಿ ದೃಢಪಡಿಸಿದ ಕೆಲವೇ ನಿಮಿಷಗಳಲ್ಲಿ, ಖಮೇನಿ ಅವರ ಅಧಿಕೃತ ಎಕ್ಸ್ ಖಾತೆಯಿಂದ ಪರ್ಷಿಯನ್ ಭಾಷೆಯಲ್ಲಿ ಪೋಸ್ಟ್ ಒಂದು ಹೊರಬಿದ್ದಿದೆ. ಅದರ ಅಂದಾಜು ಅರ್ಥ “ನಾಮಿ ಹೈದರ್ ಹೆಸರಿನಲ್ಲಿ (ಅವರಿಗೆ ಶಾಂತಿ ಸಿಗಲಿ)” ಎಂಬುದಾಗಿದೆ. ಇರಾನ್‌ನ ಹಿರಿಯ ನಾಯಕತ್ವದ ಬಹುತೇಕ ಮಂದಿ ದಾಳಿಯಲ್ಲಿ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿರುವ ಈ ಸಂದರ್ಭದಲ್ಲಿ, ಈ ಪೋಸ್ಟ್ ಅನ್ನು ಯಾರು ಮಾಡಿರಬಹುದು ಎಂಬುದು ಈಗ ರಹಸ್ಯವಾಗಿ ಉಳಿದಿದೆ.

ದಾಳಿಯ ಹಿನ್ನೆಲೆ

ಇರಾನ್‌ನ ಮಿಲಿಟರಿ ನೆಲೆಗಳು ಮತ್ತು ಸರ್ಕಾರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ಇರಾನ್‌ನಲ್ಲಿ ನಿರ್ಧಾರ ತೆಗೆದುಕೊಳ್ಳುವ ಉನ್ನತ ಮಟ್ಟದ ನಾಯಕತ್ವ ಈಗ ಸಂಪೂರ್ಣವಾಗಿ ಪತನಗೊಂಡಿದೆ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ ಕಳವಳ

ಇನ್ನೊಂದೆಡೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಈ ಬೆಳವಣಿಗೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. “ರಾಜತಾಂತ್ರಿಕ ಮಾತುಕತೆಯ ಮೂಲಕ ಶಾಂತಿ ಸ್ಥಾಪಿಸುವ ಅವಕಾಶವನ್ನು ಕೈಚೆಲ್ಲಲಾಗಿದೆ,” ಎಂದು ಅವರು ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಈವರೆಗೆ ಇರಾನ್ ಸರ್ಕಾರವು ಖಮೇನಿ ಸಾವಿನ ಸುದ್ದಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. 1989ರಿಂದ ಇರಾನ್‌ನ ಸರ್ವೋಚ್ಚ ಅಧಿಕಾರಿಯಾಗಿದ್ದ ಖಮೇನಿ, ದೇಶದ ಪರಮಾಣು ಮತ್ತು ಮಿಲಿಟರಿ ತಂತ್ರಗಾರಿಕೆಯ ಪ್ರಮುಖ ಕೇಂದ್ರಬಿಂದುವಾಗಿದ್ದರು

ಹೆಚ್ಚಿನ ಸುದ್ದಿ