ಬೆಂಗಳೂರು: ಈ ಬಾರಿ ವಿಧಾನಸಭೆ ಚುನಾವಣೆ ಟಿಕೆಟ್ ಕೈತಪ್ಪಿದ್ದಕ್ಕೆ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಕುಮಾರಸ್ವಾಮಿ ಅವರು ಮತ್ತೊಮ್ಮೆ ಮೂಡಿಗೆರೆಯಿಂದ ಕಣಕ್ಕಿಳಿಯಲು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಕ್ಷೇತ್ರದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಬಿಜೆಪಿ ಹೈಕಮಾಂಡ್, ದೀಪಕ್ ದೊಡ್ಡಯ್ಯ ಎನ್ನುವರಿಗೆ ಟಿಕೆಟ್ ಘೋಷಣೆ ಮಾಡಿದೆ. ಇದರಿಂದ ಅಸಮಧಾನಗೊಂಡ ಕುಮಾರಸ್ವಾಮಿ ಶಾಸಕ ಸ್ಥಾನದ ಜತೆಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಟಿಕೆಟ್ ಸಿಗದಿರುವ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, ನನಗೆ ಟಿಕೆಟ್ ಸಿಗದಿರಲು ಸಿ.ಟಿ.ರವಿ ಅವರೇ ಕಾರಣ. ವಯಕ್ತಿಕ ದ್ವೇಷದಿಂದಾಗಿ ನನಗೆ ಟಿಕೆಟ್ ನೀಡುವುದನ್ನು ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಏನಾದರೂ ಪ್ರಧಾನ ಕಾರ್ಯದರ್ಶಿ ಆಗಿದ್ದರೆ ಸಿಟಿ ರವಿಗೆ ಟಿಕೆಟ್ ತಪ್ಪಿಸುತ್ತಿದ್ದೆ. ಸಿಟಿ ರವಿಯಿಂದ ಚಿಕ್ಕಮಗಳೂರಲ್ಲಿ ಬಿಜೆಪಿ ನಿರ್ನಾಮವಾಗುತ್ತದೆ. ಅಲ್ಲದೇ, ಯಡಿಯೂರಪ್ಪನವರೇ ನೀವು ಒಂದು ವಾರ ಮೊಬೈಲ್ ಸ್ವಿಚ್ ಆಫ್ ಮಾಡಿ, ಈ ಬಾರಿ ಬಿಜೆಪಿಗೆ 50 ಸೀಟುಗಳು ಬರುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ದಲಿತರಿಗೆ ಉಸಿರು ಕಟ್ಟುವ ವಾತವಾರಣ ಇದೆ. ಹಳೆ ಮೈಸೂರು ಭಾಗದಲ್ಲಿ ದಲಿತ ಬಲಗೈ ಶಾಸಕರಲ್ಲಿ ನಾನೇ ಗೆಲ್ಲುವ ಅವಕಾಶ ಇತ್ತು, ಇವಾಗ ನನಗೆ ಅನ್ಯಾಯ ಮಾಡಿದ್ದಾರೆ ಅಂದರೆ ಬೇರೆ ಯಾರು ಕೂಡ ಗೆಲ್ಲೋದಿಲ್ಲ. ನಮ್ಮ ದಲಿತ ಸಮುದಾಯದ ಯಾರು ಕೂಡ ಬಿಜೆಪಿಗೆ ಮತ ಹಾಕಬಾರದು ಎಂದಿದ್ದಾರೆ. ನಾನು ಪಕ್ಷೇತರ ವಾಗಿ ಸ್ಪರ್ಧೆ ಮಾಡಲ್ಲ, ರಾಜಕೀಯ ಪಕ್ಷಗಳಿಂದಲೇ ಸ್ಪರ್ಧೆ ಮಾಡ್ತೀನಿ. ಯಾವ ಪಕ್ಷ ಎಂದು ಕ್ಷೇತ್ರದಲ್ಲೇ ಪ್ರಕಟ ಮಾಡುತ್ತೇನೆ ಎಂದಿದ್ದಾರೆ.
