ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯತ್ವಕ್ಕೆ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಶಿವಮೊಗ್ಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಹುಬ್ಬಳ್ಳಿಗೆ ತೆರಳಿ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಭೇಟಿ ಮಾಡಿ, ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಹೇಳಿದ್ದು, ಇದೇ ಸಂದರ್ಭದಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.
ಈ ಹಿಂದೆ ತಿಳಿಸಿದಂತೆಯೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಪದವೀಧರರು, ನೌಕರರು, ಕಾರ್ಮಿಕರ ಹಿತರಕ್ಷಣೆಗಾಗಿ ವಿಧಾನ ಸಭೆ ಪ್ರವೇಶ ಬಯಸಿದ್ದೇನೆ. ಗುರುವಾರ ನಾಮಪತ್ರ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ. ನಗರದ ಜನರ ಶಾಂತಿಯುತ ಬದುಕಿಗೆ ಅವಕಾಶ ಕಲ್ಪಿಸುವ ಉದ್ದೇಶ ನನ್ನದು. ಅಶಾಂತ ನಗರ ಎಂಬ ಅಪಖ್ಯಾತಿಯಿಂದ ಶಿವಮೊಗ್ಗವನ್ನು ಮುಕ್ತವಾಗಿಸಲು ನಾನು ಬದ್ಧ. ಆ ಮೂಲಕ ನಗರಕ್ಕೆ ಉದ್ಯಮಗಳು ಬರುವಂತೆ ಮಾಡಿ ಉದ್ಯೋಗಾವಕಾಶ ಕಲ್ಪಿಸಬಯಸಿದ್ದೇನೆ ಎಂದು ನುಡಿದಿದ್ದಾರೆ.
ಕುಬೇರರು ಮತ್ತು ಬಲಾಢ್ಯರ ಎದುರು ಸ್ಪರ್ಧೆ ಮಾಡುತ್ತಿದ್ದು ನಗರದ ಜನತೆ ನನ್ನ ಬೆಂಬಲಿಸಲು ಮನವಿ ಮಾಡುತ್ತೇನೆ. ತೆನೆ ಹೊರುತ್ತೇನೋ ಇಲ್ಲವೋ ಎಂಬ ಬಗ್ಗೆ ಕೆಲ ನಾಯಕರ ಜೊತೆ ಮಾತನಾಡಿ ನಿರ್ಧರಿಸುತ್ತೇನೆ. ಅದು ರಾಜ್ಯ ರಾಜಕೀಯ ಪಕ್ಷದ ನಾಯಕರೊಂದಿಗೆ ಎನ್ನುವ ಮೂಲಕ ಜೆಡಿಎಸ್ ಸೇರುವ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ.
