ಬೆಂಗಳೂರು: ಕರ್ನಾಟಕದ ಆಡಳಿತದ ಚುಕ್ಕಾಣಿ ಹಿಡಿಯುವ ತವಕದಲ್ಲಿ ಕಾಂಗ್ರೆಸ್ ಇದ್ರೆ ಇತ್ತ ಬಿಜೆಪಿ ಅಧಿಕಾರವನ್ನು ಮುಂದುವರಿಸಲು ಹವಣಿಸುತ್ತಿದೆ.
ರಾಜ್ಯದ ಮತದಾರರನ್ನು ಸೆಳೆಯಲು ಬಿಜೆಪಿ ಈಗಾಗಲೇ ವಿಜಯ ಸಂಕಲ್ಪ ಯಾತ್ರೆ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಮಾಡಿವೆ. ರಾಜ್ಯದಲ್ಲಿ ಹೆಚ್ಚು ಪರಿಣಾಮಕಾರಿ ಪ್ರಚಾರಕ್ಕಾಗಿ ಮೋದಿಯವರ ಜನಪ್ರಿಯತೆಯನ್ನು ಉಪಯೋಗಿಸಿಕೊಳ್ಳಲು ಬಿಜೆಪಿ ಯೋಚಿಸಿದೆ.
ಪ್ರಜಾಧ್ವನಿ ಯಾತ್ರೆಯ ಮೂಲಕ ಕಾಂಗ್ರೆಸ್ ಜನರ ಮನೆ ಮನೆ ತಲುಪುವ ಕಾರ್ಯ ಮಾಡಿದ್ದು ಬಿಜೆಪಿ ಇದಕ್ಕೆ ಪ್ರತಿಯಾಗಿ ವಿಜಯಸಂಕಲ್ಪ ಯಾತ್ರೆ ಮಾಡಿತ್ತು. ಆದ್ರೆ ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಗೆಲುವನ್ನು ಸೂಚಿಸುತ್ತಿರುವ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ನರೇಂದ್ರ ಮೋದಿ ಅವರ ವರ್ಚಸ್ಸನ್ನು ಮತ ಗಳಿಕೆಗೆ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
ಹೈದರಾಬಾದ್ ಕರ್ನಾಟಕ, ಕಿತ್ತೂರು ಕರ್ನಾಟಕ,ಮಧ್ಯಕರ್ನಾಟಕ, ಹಳೆ ಮೈಸೂರು, ಕರಾವಳಿ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಮೋದಿ ನೇತೃತ್ವದ ಕನಿಷ್ಠ 3 ರ‍್ಯಾಲಿಗಳನ್ನು ಆಯೋಜಿಸಲು ಯೋಜಿಸಲಾಗಿದೆ. ಪ್ರಚಾರದ ಕೊನೆಯ ಹಂತದಲ್ಲಿ ಮೋದಿ ಕರ್ನಾಟಕದಲ್ಲೇ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಪ್ರಬಲ್ಯವಿಲ್ಲದ ಕ್ಷೇತ್ರಗಳಿಗೆ ಮೋದಿ ಹೆಚ್ಚು ಗಮನ ನೀಡಲಿದ್ದು ಈ ಬಾರಿ ಮೋದಿ ಮ್ಯಾಜಿಕ್ ಬಳಸದೇ ದಾರಿಯಿಲ್ಲ ಎಂಬಂತೆ ಕರ್ನಾಟಕದ ಉದ್ದಗಲಕ್ಕೂ ಪ್ರಧಾನಿಯವರ ಜಾಥಾ ನಡೆಸಲು ಬಿಜೆಪಿ ನಿರ್ಧರಿಸಿದೆ.
