ಬೆಳಗಾವಿ: ಸವದತ್ತಿ ಅಷ್ಟೇ ಅಲ್ಲದೇ ಇಡೀ ಉತ್ತರ ಕರ್ನಾಟಕವನ್ನೇ ದತ್ತು ತೆಗೆದುಕೊಂಡು, ತಾರತಮ್ಯ ಸರಿಪಡಿಸುವುದೇ ನನ್ನ ಜೀವನದ ಗುರಿ ಎಂದು ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸವದತ್ತಿಯಲ್ಲಿ ಜೆಡಿಎಸ್ ಪಂಚರತ್ನ ಸಮಾವೇಶದಲ್ಲಿ ಭಾಗಿಯಾಗಿ ಬಳಿಕ ಮಾಧ್ಯಮಗಳೊಂದಿಗೆ ಅವರು, ಬರೀ ಸವದತ್ತಿ ಒಂದೇ ಅಲ್ಲ, ಇಡೀ ಉತ್ತರ ಕರ್ನಾಟಕದ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಪೂರ್ಣ ಅಭಿವೃದ್ಧಿ ಮಾಡಲಿದ್ದೇವೆ ಎಂದರು. ಹಳೇ ಕರ್ನಾಟಕ ಭಾಗದಲ್ಲಿ ನಾವು ಪ್ರಾಮಾಣಿಕವಾಗಿ ಅಭಿವೃದ್ಧಿ ಮಾಡಿದ್ದೇವೋ, ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ, ಬಡತನ ನಿವಾರಿಸುವ ಸವಾಲು ಸ್ವೀಕರಿಸಿದ್ದೇನೆ. ಅದಕ್ಕೆ ಜನರ ಸಂಪೂರ್ಣ ವಿಶ್ವಾಸ ಪಡೆಯಲು ಬಂದಿದ್ದೇನೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ. ಇನ್ನು ಎರಡೂರು ಬಾರಿ ಬೆಳಗಾವಿಗೆ ಬರಲಿದ್ದೇನೆ. ಕಳೆದ ಬಾರಿ ಯಮಕನಮರಡಿ ಕ್ಷೇತದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕೇವಲ 2850 ಮತಗಳ ಅಂತರದಿಂದ ಸೋತಿದ್ದ ಮಾರುತಿ ಅಷ್ಟಾಗಿ ಈಗ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಬಿಜೆಪಿಯವರ ಮ್ಯಾಚ್ ಫಿಕ್ಸಿಂಗ್‌ನಿಂದ ನಾನು ಸೋಲು ಅನುಭವಿಸಬೇಕಾಯಿತು ಎಂದು ಅಷ್ಟಾಗಿ ಬಹಳ ನೋವಿನಿಂದ ಹೇಳಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಎಲ್ಲ ರೀತಿ ಶಕ್ತಿ ತುಂಬುವ ಕೆಲಸ ಮಾಡಲಿದ್ದೇನೆ ಎಂದು ಹೇಳಿದರು.
