ರಾಮನಗರ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಆಸ್ತಿ ಘೋಷಣೆ ಮಾಡಿದ್ದು, ಅಪ್ಪಾ-ಮಗನ ಒಟ್ಟು ಆಸ್ತಿ 266 ಕೋಟಿ.
ಕುಮಾರಸ್ವಾಮಿ ಸುಮಾರು 189.27 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಕುಮಾರಸ್ವಾಮಿ, ಅನಿತಾ ದಂಪತಿ ಒಟ್ಟಾಗಿ 92.84 ಕೋಟಿ ರೂ ಸ್ಥಿರಾಸ್ತಿ ಹಾಗೂ 96.43 ಕೋಟಿ ರೂ ಚರಾಸ್ತಿ ಹೊಂದಿದ್ದಾರೆ. 92.84 ಕೋಟಿ ರೂ ಸ್ಥಿರಾಸ್ತಿ (ಕುಮಾರಸ್ವಾಮಿ, ಅನಿತಾ ದಂಪತಿ ಒಟ್ಟಾಗಿ), 96.43 ಕೋಟಿ ರೂ ಚರಾಸ್ತಿ (ಕುಮಾರಸ್ವಾಮಿ, ಅನಿತಾ ದಂಪತಿ ಒಟ್ಟಾಗಿ), ಅನಿತಾ ಕುಮಾರಸ್ವಾಮಿ ವೈಯಕ್ತಿಕವಾಗಿ 125 ಕೋಟಿಯಷ್ಟು ಆಸ್ತಿ ಗಳಿಸಿದ್ದು, ಹೆಚ್.ಡಿ ಕುಮಾರಸ್ವಾಮಿಗಿಂತ ಅವರ ಆಸ್ತಿಯೇ ಹೆಚ್ಚಿದೆ.
ಕುಮಾರಸ್ವಾಮಿ ಹೆಸರಲ್ಲಿ 750 ಗ್ರಾಂ ಚಿನ್ನ, 12.5ಕೆಜಿ ಬೆಳ್ಳಿ, 4 ಕ್ಯಾರಟ್ ವಜ್ರ ಇದ್ದು, ಪತ್ನಿ ಅನಿತಾ ಹೆಸರಲ್ಲಿ 3.8 ಕೆಜಿ ಚಿನ್ನ, 17ಕೆ.ಜಿ.ಬೆಳ್ಳಿ, 50 ಕ್ಯಾರಟ್ ವಜ್ರ ಇದೆ. ಕುಮಾರಸ್ವಾಮಿ ಹೆಸರಿನಲ್ಲಿ ಟ್ರ್ಯಾಕ್ಟರ್ ಮಾತ್ರ ಇದ್ದು, ಪತ್ನಿ ಅನಿತಾ ಹೆಸರಲ್ಲಿ ಇನೋವಾ ಕ್ರಿಸ್ಟ ಹಾಗೂ ಎಂಟು ಮಾರುತಿ ಎಕೋ ಕಾರುಗಳು ಇವೆ.
48 ಎಕರೆಗೂ ಹೆಚ್ಚು ಕೃಷಿ ಜಮೀನು ಇದ್ದು, 2021–22ನೇ ಸಾಲಿನಲ್ಲಿ ಇದರಿಂದ 47 ಲಕ್ಷದಷ್ಟು ಕೃಷಿ ಆದಾಯ ನೀಡಿದ್ದಾರೆ. ಅನಿತಾ ಬಳಿ ವಾಣಿಜ್ಯ ಆಸ್ತಿಗಳು ಹೆಚ್ಚಿದ್ದು, ಸಾಕಷ್ಟು ಕಂಪನಿಗಳಲ್ಲೂ ಹೂಡಿಕೆ ಮಾಡಿದ್ದಾರೆ.
ಇನ್ನೂ ನಿಖಿಲ್ ಕುಮಾರಸ್ವಾಮಿ ಆಸ್ತಿ ನೋಡುವುದಾದರೆ, ನಿಖಿಲ್ ಕುಮಾರಸ್ವಾಮಿ ಕುಟುಂಬ ಒಟ್ಟು 77 ಕೋಟಿ ರೂ. ಮೌಲ್ಯದ ಆಸ್ತಿ ಇದೆ.
ನಿಖಿಲ್ ಸೋಮವಾರ ರಾಮನಗರದಲ್ಲಿ ನಾಮಪತ್ರ ಸಲ್ಲಿಸಿದ್ದು, ಇದರೊಟ್ಟಿಗೆ ತಮ್ಮ ಆಸ್ತಿ ವಿವರಗಳ ಪ್ರಮಾಣಪತ್ರವನ್ನೂ ನೀಡಿದ್ದಾರೆ. ಅದರಂತೆ ಅವರ ಬಳಿ ₹46.81 ಕೋಟಿ ಹಾಗೂ ಅವರ ಪತ್ನಿ ರೇವತಿ ಹೆಸರಿನಲ್ಲಿ ₹1.79 ಕೋಟಿ ಮೌಲ್ಯದ ಚರಾಸ್ತಿ ಇದೆ. ಜೊತೆಗೆ ನಿಖಿಲ್ ಬಳಿ 28 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಅವರ ಪತ್ನಿ ಬಳಿ 28 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ಒಟ್ಟು 38.94 ಕೋಟಿ ಸಾಲ ತೋರಿಸಿದ್ದಾರೆ.
2019ರ ಲೋಕಸಭೆ ಚುನಾವಣೆ ವೇಳೆ ನಿಖಿಲ್ 74 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದ್ದರು.
