ಶಿವಮೊಗ್ಗ: ಹಲವು ದಶಕಗಳಿಂದ ಸಕ್ರಿಯ ರಾಜಕಾರಣಿಯಾಗಿರುವ ಮಾಜಿ ಸಚಿವ ಈಶ್ವರಪ್ಪ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಮಂಗಳವಾರ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ರಾಜಕೀಯ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.
ಕಳೆದ ಬಾರಿಯೇ ದೆಹಲಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ತನಗೆ ಚುನಾವಣಾ ರಾಜಕಾರಣದಿಂದ ನಿವೃತ್ತಿ ನೀಡಬೇಕೆಂದು ಮನವಿ ಸಲ್ಲಿಸಿದ್ದೆ. ಆದರೆ ವರಿಷ್ಠರು ಅದಕ್ಕೆ ಸಮ್ಮತಿ ನೀಡಿರಲಿಲ್ಲ. ಹೀಗಾಗಿ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರಿಗೆ ಪತ್ರ ಮುಖೇನ ತಮ್ಮ ನಿವೃತ್ತಿ ನಿರ್ಧಾರವನ್ನು ತಿಳಿಸಿರುವುದಾಗಿ ಈಶ್ವರಪ್ಪ ನುಡಿದರು.
ಇದೇ ವೇಳೆ, ಇದುವರೆಗೂ ಬಿಜೆಪಿ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡ ಹಾಗೂ ಬಸವರಾಜ ಬೊಮ್ಮಾಯಿ ಬಿಜೆಪಿಯಿಂದ ಮುಖ್ಯಮಂತ್ರಿಗಳಾಗಿದ್ದಾರೆ. ಜನರು ಬಿಜೆಪಿ ಆಡಳಿತವನ್ನು ಬಯಸಿದ್ದಾರೆ. ಆದರೆ ಇದುವರೆಗೂ ಪೂರ್ಣ ಪ್ರಮಾಣದ ಬಹುಮತ ನೀಡಿಲ್ಲ. ಹೀಗಾಗಿ ರಾಜ್ಯಾದ್ಯಂತ ಸಂಘಟನೆಯಲ್ಲಿ ತೊಡಗಿ ಬಿಜೆಪಿಯನ್ನು ಬಹುಮತಕ್ಕೆ ತರುವುದೇ ನನ್ನ ಮುಂದಿನ ಗುರಿ ಎಂದು ಈಶ್ವರಪ್ಪ ತಿಳಿಸಿದ್ದಾರೆ.
ಮುಂದಿನ ೨೦೨೪ ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ದೇಶವೇ ಬಯಸುತ್ತಿದೆ. ಈ ಆಶಯದ ಜೊತೆಗೆ ನಾನೂ ಸಹ ಕೈಜೋಡಿಸಲು ಬಯಸುತ್ತೇನೆ ಎಂದು ಈಶ್ವರಪ್ಪ ನುಡಿದಿದ್ದಾರೆ.
ಶಿವಮೊಗ್ಗದ ನಿವಾಸದ ಮುಂದೆ ಈಶ್ವರಪ್ಪ ಅಭಿಮಾನಿಗಳು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
