ಬೆಳಗಾವಿ: ವರಿಷ್ಠರ ನಿರ್ಲಕ್ಷ್ಯದಿಂದಾಗಿ ಬೇಸತ್ತು ಪಕ್ಷ ತೊರೆಯುತ್ತಿದ್ದೇನೆಯೇ ಹೊರತು ಟಿಕೆಟ್ ವಂಚಿತನಾದ ಬೇಸರದಿಂದಲ್ಲ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ. ಗುರುವಾರ ಅಥಣಿಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸ್ವಾಭಿಮಾನಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇರವಾಗಿ ಕರೆ ಮಾಡದಿದ್ದರೂ, ಅವರ ಆಪ್ತರಿಂದ ಮಾತನಾಡಿಸಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ಸೇರ್ಪಡೆಯ ಸುಳಿವು ನೀಡಿದರು. ಜೊತೆಗೆ ಶುಕ್ರವಾರ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಸವದಿ, ವೇದಿಕೆಯ ಮೇಲೆ ಕಾಂಗ್ರೆಸ್ ನಾಯಕರನ್ನು ಮನಸೋಇಚ್ಛೆ ಪ್ರಶಂಸೆ ಮಾಡಿದರು.
ಗುರುವಾರ ಮಧ್ಯಾಹ್ನವೇ ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡುತ್ತಾ, ನಾನು ಅತ್ಯಾಚಾರ ಮಾಡಿದ್ದೇನೆಯೇ ಅಥವಾ ಯಾರ ಸೆರಗಿಗಾದರೂ ಕೈ ಹಾಕಿದ್ದೇನೆಯೇ ಎನ್ನುವ ಕಟುವಾದ ಮಾತುಗಳ ಮೂಲಕ ಬಿಜೆಪಿ ವರಿಷ್ಠರ ನಿರ್ಧಾರವನ್ನು ಖಂಡಿಸಿದರು. ಡಿಸಿಎಂ ಪದವಿಯನ್ನು ಕಿತ್ತುಕೊಳ್ಳಲಾಯಿತು. ವಿಧಾನ ಪರಿಷತ್ ಆಯ್ಕೆಯಾಗದಂತೆ ಸಂಚು ರೂಪಿಸಲಾಯಿತು. ಆದರೆ ಕಷ್ಟಕಾಲದಲ್ಲಿ ಕಾಂಗ್ರೆಸ್ ನ ಸಿದ್ದರಾಮಯ್ಯ ಕೈ ಹಿಡಿದು ನನ್ನನ್ನು ರಕ್ಷಿಸಿದರು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಕ್ಷೇತ್ರಕ್ಕೆ ನೀಡಿದ ಕೊಡುಗೆ, ಅನುದಾನಗಳನ್ನು ಸ್ಮರಿಸಿದ ಲಕ್ಷ್ಮಣ ಸವದಿ ಈಗಲೂ ನಾನು ಪಕ್ಷ ಬಿಟ್ಟು ಹೊರಟಿಲ್ಲ. ನನ್ನು ಕತ್ತು ಹಿಡಿದು ಪಕ್ಷದಿಂದ ಹೊರತಳ್ಳಲಾಗುತ್ತಿದೆ ಎಂದರು. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳೊಂದಿಗೆ ಚರ್ಚೆ ನಡೆಸಿ ತಮ್ಮ ಮುಂದಿನ ತೀರ್ಮಾನವನ್ನು ಕೈಗೊಳ್ಳುವುದಾಗಿ ಸವದಿ ನುಡಿದಿದ್ದಾರೆ.
ಗೆದ್ದರೆ ಶಾಸಕನಾಗಿ ಹಾರ ಹಾಕಿಸಿಕೊಳ್ಳುತ್ತೇನೆ, ಇಲ್ಲವಾದಲ್ಲಿ ಸತ್ತ ಮೇಲೆ ಹೆಣಕ್ಕೆ ಹಾರ ಹಾಕಿಸಿಕೊಳ್ಳುತ್ತೇನೆಯೇ ಹೊರತು ಜೀವನದಲ್ಲಿ ಮತ್ತೆ ಹಾರಹಾಕಿಸಿಕೊಳ್ಳಲಾರೆ ಎಂದು ವೇದಿಕೆಯ ಮೇಲೇ ಲಕ್ಷ್ಮಣ ಸವದಿ ಪ್ರತಿಜ್ಞೆ ಮಾಡಿದರು. ಲಕ್ಷ್ಮಣ ಸವದಿ ಬೆಂಬಲಿಗರು, ಕಾರ್ಯಕರ್ತರು ಸೇರಿದಂತೆ ೧೦ ಸಾವಿರಕ್ಕೂ ಹೆಚ್ಚು ಮಂದಿ ಸಮಾವೇಶದಲ್ಲಿ ಭಾಗವಹಿಸಿದ್ದರು.
