ಉತ್ತರ ಕನ್ನಡ: ಮೂಡಿಗೆರೆ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಎಂಪಿ ಕುಮಾರಸ್ವಾಮಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಆಗಮಿಸಿದ್ದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಬುಧವಾರ ರಾತ್ರಿ ಬಿಜೆಪಿ ತನ್ನ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ ಪಟ್ಟಿಯಲ್ಲಿ ಮೂಡಿಗೆರೆಯ ಹಾಲಿ ಶಾಸಕರ ಹೆಸರು ಇರಲಿಲ್ಲ. ಕುಮಾರಸ್ವಾಮಿ ಬದಲಿಗೆ ಬಿಜೆಪಿ ದೀಪಕ್ ದೊಡ್ಡಯ್ಯ ಅವರಿಗೆ ಈ ಬಾರಿ ಅವಕಾಶ ನೀಡಿದೆ. ಇದರಿಂದ ಪಕ್ಷ ಹಾಗೂ ನಾಯಕರ ವಿರುದ್ಧ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, ನನಗೆ ಟಿಕೆಟ್ ಸಿಗದಿರಲು ಸಿಟಿ ರವಿ ಹಾಗೂ ಪ್ರಾಣೇಶ್ ಕಾರಣ. ವೈಯಕ್ತಿಕ ದೇಷದಿಂದಾಗಿ ಹೀಗೆ ಮಾಡಿದ್ದಾರೆ. ಸಿ.ಟಿ. ರವಿ ಅವ್ರಿಂದ ಪಕ್ಷ ನಿರ್ನಾಮವಾಗುತ್ತದೆ. ಸಿಟಿ ರವಿ ಬಿಜೆಪಿಗೆ ಮಾರಕ. ಮುಂದಿನ ಬಾರಿ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ನನಗೆ ಇನ್ನೂ ವಯಸ್ಸಾಗಿಲ್ಲ, ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ಯಾವ ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದುದನ್ನು ಶೀಘ್ರದಲ್ಲೇ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
