ನವದೆಹಲಿ: ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ವಿಫಲರಾಗಿ ಬಿಜೆಪಿ ಸೇರ್ಪಡೆಗೊಂಡಿದ್ದ ನಾಗರಾಜ್ ಛಬ್ಬಿ ಬಿಜೆಪಿಯಿಂದ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಕಲಘಟಗಿಯಿಂದ ಸ್ಪರ್ಧಿಸಬೇಕೆಂಬ ಪ್ರಬಲ ಆಕಾಂಕ್ಷೆ ಹೊಂದಿದ್ದ ನಾಗರಾಜ್ ಛಬ್ಬಿಗೆ ಕಾಂಗ್ರೆಸ್ ಟಿಕೆಟ್ ನೀಡದೇ ಸಂತೋಷ್ ಲಾಡ್ ಗೆ ಮಣೆ ಹಾಕಿತ್ತು. ಇದರಿಂದ ಅಸಮಾಧಾನಗೊಂಡ ನಾಗರಾಜ್ ಛಬ್ಬಿ ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿದ್ರು. ಇದೀಗ ಛಬ್ಬಿ ಕಲಘಟಗಿ ಕ್ಷೇತ್ರದ ಟಿಕೆಟ್ ಪಡೆದಿದ್ದು ಬಿಜೆಪಿ ಪ್ರತಿನಿಧಿಯಾಗಿ ಕಣಕ್ಕಿಳಿಯಲಿದ್ದಾರೆ
ಕಾಂಗ್ರೆಸ್ ಪಕ್ಷ ಸಂತೋಷ್ ಲಾಡ್‌ಗೆ ಟಿಕೆಟ್ ನೀಡಿದ್ದಕ್ಕೆ ಛಬ್ಬಿ ತೀವ್ರ ಅಸಮಾಧಾನ ಹೊರಹಾಕಿದ್ರು. ಈ ಅಸಮಧಾನದ ಹೊಗೆಯನ್ನು ಗುರುತಿಸಿದ ಬಿಜೆಪಿ ತಕ್ಷಣವೇ ಛಬ್ಬಿಯವರಿಗೆ ಗಾಳ ಹಾಕಿತ್ತು. ಸಚಿವ ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ನಡೆದ ಮೊದಲ ಹಂತದ ಸಂಧಾನ ಯಶಸ್ವಿಯಾಗಿತ್ತು. ಬಳಿಕ ರಾಜ್ಯಮಟ್ಟದ ನಾಯಕರ ಸಮ್ಮುಖದಲ್ಲಿ ಛಬ್ಬಿ ಬಿಜೆಪಿ ಸೇರ್ಪಡೆಯಾಗಿದ್ದರು. ಈಗ ಬಿಜೆಪಿಯಿಂದ ಟಿಕೆಟ್ ಕೂಡ ಗಳಿಸಿದ್ದು ಕಲಘಟಗಿ ಕ್ಷೇತ್ರದಲ್ಲಿ ಭಾರೀ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದಾಗಿದೆ.
