ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಮಹಿಳೆಗೆ ಟಿಕೆಟ್ ನೀಡಿರುವುದನ್ನು ಉಲ್ಲೇಖಿಸಿ ಬಿಜೆಪಿಯ ದಲಿತೋದ್ಧಾರ ಎಂದು ಟ್ವೀಟ್ ಮಾಡಿ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ರೋಲ್‌ಗೆ ಗುರಿಯಾಗಿದ್ದಾರೆ.
“ದಲಿತೋದ್ಧಾರ ಎಂಬುದು ಬಿಜೆಪಿಗೆ ಭಾಷಣದ ಸರಕಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ, ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಆದಿದ್ರಾವಿಡ ಸಮುದಾಯದ ಓರ್ವ ಮಹಿಳೆ, ಮಹಿಳಾ ಮೋರ್ಚಾದ ಸಾಮಾನ್ಯ ಕಾರ್ಯಕರ್ತೆ ‘ಭಾಗೀರತಿ ಮರುಲ್ಯ’ರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಈ ಎಲ್ಲವೂ ಬಿಜೆಪಿಯಲ್ಲಿ ಮಾತ್ರ ಸಾಧ್ಯ!” ಎಂದು ನಳಿನ್ ಕುಮಾರ್ ಕಟೀಲ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದು ವ್ಯಾಪಕ ಟ್ರೋಲ್‌ಗೆ ಒಳಗಾಗಿದ್ದು, ಮೀಸಲು ಕ್ಷೇತ್ರದಲ್ಲಿ ದಲಿತರಿಗಲ್ಲದೆ ಸಾಮಾನ್ಯರಿಗೆ ಟಿಕೆಟ್ ನೀಡಲಾಗುತ್ತದೆಯೇ ಎಂದು ನೆಟ್ಟಿಗರು ಕಟೀಲ್ ರನ್ನು ಪ್ರಶ್ನಿಸಿದ್ದಾರೆ.
ಮೀಸಲು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ನಿಲ್ಲುವುದಾದರೂ ದಲಿತರೇ ನಿಲ್ಲಬೇಕು, ಸಾಧ್ಯವಿದ್ದರೆ ಸಾಮಾನ್ಯ ಕ್ಷೇತ್ರದಲ್ಲಿ ದಲಿತರನ್ನು ನಿಲ್ಲಿಸಿ ಗೆಲ್ಲಿಸಿ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ಕನ್ನಡ ಸಂಸದ ಸ್ಥಾನವನ್ನೂ ದಲಿತರಿಗೆ ಬಿಟ್ಟು ಕೊಡಿ ಎಂದು ಇನ್ನು ಕೆಲವರು ಸವಾಲು ಹಾಕಿದ್ದು, ಸಚಿವ ಅಂಗಾರರಿಗೆ ಟಿಕೆಟ್ ನಿರಾಕರಣೆ ಮಾಡಿರುವುದನ್ನೂ ಪ್ರಶ್ನಿಸಿದ್ದಾರೆ.
