Sunday, June 21, 2026
Homeಚುನಾವಣೆ 2023ಪಕ್ಷ ತ್ಯಾಗಕ್ಕೆ ಸಿದ್ದರಾದ ಶೆಟ್ಟರ್ - ಮನವೊಲಿಕೆಗೆ ಮುಂದಾದ ಜೋಷಿ

ಪಕ್ಷ ತ್ಯಾಗಕ್ಕೆ ಸಿದ್ದರಾದ ಶೆಟ್ಟರ್ – ಮನವೊಲಿಕೆಗೆ ಮುಂದಾದ ಜೋಷಿ

ಹುಬ್ಬಳ್ಳಿ: ಲಕ್ಷ್ಮಣ್ ಸವದಿ ಬಿಜೆಪಿ ತೊರೆದ ಹಿನ್ನೆಲೆಯಲ್ಲೇ ಮತ್ತೊಬ್ಬ ಹಿರಿಯ ನಾಯಕರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಕ್ಷ ತೊರೆಯುವ ಆತಂಕ ಬಿಜೆಪಿಗೆ ಎದುರಾಗಿದೆ. ಹುಬ್ಬಳ್ಳಿ ಧಾರವಾಡ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಬಿಜೆಪಿಗೆ ವಿದಾಯ ಹೇಳಲು ಸಿದ್ದರಾಗಿದ್ದಾರೆನ್ನಲಾಗಿದ್ದು, ಅವರ ನಿವಾಸಕ್ಕೆ ತೆರಳಿ ಮನವೊಲಿಸುವ ಕಾರ್ಯಕ್ಕೆ ಪ್ರಲ್ಹಾದ್ ಜೋಷಿ ಮುಂದಾಗಿದ್ದಾರೆ.
ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಧಾನಗೊಂಡಿದ್ದ ಜಗದೀಶ್ ಶೆಟ್ಟರ್, ಬಿಜೆಪಿ ಟಿಕೆಟ್ ಕೊಡಲಿ ಬಿಡಲಿ ನಾನಂತೂ ಸ್ಪರ್ಧಿಸುವುದು ಖಚಿತ ಎಂಬ ಹೇಳಿಕೆ ನೀಡುವ ಮೂಲಕ ಬಂಡಾಯವೆದ್ದಿದ್ದರು. ಬಳಿಕ ದೆಹಲಿಗೆ ತೆರಳಿ ರಾಷ್ಟ್ರನಾಯಕರೊಂದಿಗೆ ಚರ್ಚೆಯನ್ನೂ ನಡೆಸಿದ್ದರು. ಶನಿವಾರದವರೆಗೂ ಗಡುವು ನೀಡಿದ್ದ ಜಗದೀಶ್ ಶೆಟ್ಟರ್ ಪಕ್ಷೇತರರಾಗಿ ಕಣಕ್ಕಿಳಿಯುವ ಮುನ್ಸೂಚನೆಯನ್ನೂ ನೀಡಿದ್ದರು. ಹೀಗಾಗಿ ಜಗದೀಶ್ ಶೆಟ್ಟರ್ ಮನವೊಲಿಕೆಗೆ ಪ್ರಲ್ಹಾದ್ ಜೋಷಿ ಮುಂದಾಗಿದ್ದು, ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಸಚಿವ ಶಂಕರ್ ಪಾಟೀಲ್ ಮುನೇಕೊಪ್ಪ ಕೂಡ ಜಗದೀಶ್ ಶೆಟ್ಟರ್ ನಿವಾಸಕ್ಕೆ ಆಗಮಿಸಿದ್ದು, ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಅಭಿಮಾನಿಗಳೊಡನೆ ಶೆಟ್ಟರ್ ಚರ್ಚೆ ನಡೆಸಲಿದ್ದು ಬಳಿಕ ತಮ್ಮ ರಾಜಕೀಯ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಈಗಾಗಲೇ ಶೆಟ್ಟರ್ ಮನೆಮುಂದೆ ಜಮಾಯಿಸಿರುವ ಕಾರ್ಯಕರ್ತರು ಶೆಟ್ಟರ್ ಪರವಾಗಿ ಜಯಘೋಷಗಳನ್ನು ಕೂಗುತ್ತಿದ್ದು, ಒಂದೊಮ್ಮೆ ಟಿಕೆಟ್ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನೂ ಹಾಕಿದ್ದಾರೆ.

ಹೆಚ್ಚಿನ ಸುದ್ದಿ