ಬೀದರ್: ಟಿಕೆಟ್ ಸಿಗದ ಕಾರಣ ಸೂರ್ಯಕಾಂತ ನಾಗಮಾರಪಳ್ಳಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಅವರಿಗೆ ಪತ್ರ ಬರೆದಿರುವ ನಾಗಮಾರಪಳ್ಳಿ, ಬೀದರ್ ಕ್ಷೇತ್ರದಲ್ಲಿ ಪಕ್ಷ ಕಟ್ಟಿ ಬೆಳೆಸಿದ ನಂತರವೂ ನನಗೆ ಟಿಕೆಟ್ ನೀಡಿಲ್ಲ. ಈ ಬಗ್ಗೆ ಯಾರ ವಿರುದ್ಧವೂ ಬೇಸರ ಇಲ್ಲ. 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಹೀಗೆಯೇ ಮಾಡಲಾಗಿತ್ತು. ಬೇಸರ ಮಾಡಿಕೊಳ್ಳದೆ ಕ್ಷೇತ್ರದಲ್ಲಿ ಬಿಜೆಪಿ ಬಲಗೊಳಿಸಲು ಶ್ರಮಿಸಿದ್ದೇನೆ. ಆದರೂ ಯಾವ ಕಾರಣಕ್ಕೆ ಟಿಕೆಟ್ ನಿರಾಕರಿಸಲಾಗಿದೆ ಎಂಬುದು ತಿಳಿಯುತ್ತಿಲ್ಲ. ನನ್ನ ಬೆಂಬಲಿಗರು, ಹಿತೈಷಿಗಳಿಗೆ ನೋವುಂಟು ಮಾಡಿದೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಎಲ್ಲರೂ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಅನಿವಾರ್ಯ ಕಾರಣಗಳಿಂದ ಬಿಜೆಪಿಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನಾಗಮಾರಪಳ್ಳಿ ಅವರ ಈ ನಿರ್ಧಾರ ಚುನಾವಣೆ ಹೊಸ್ತಿಲಲ್ಲಿ ಬೀದರ್ ಬಿಜೆಪಿ ಪಾಳಯದಲ್ಲಿ ಹೊಸದೊಂದು ಬಿಕ್ಕಟ್ಟು ಸೃಷ್ಟಿಸಿದಂತಾಗಿದೆ. ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಸೂರ್ಯಕಾಂತ ನಾಗಮಾರಪಳ್ಳಿ ಮತ್ತವರ ಟೀಮ್ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರಿತು.
