ಚಿತ್ರದುರ್ಗ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಈಗಾಗಲೇ ಟಿಕೆಟ್ ಹಂಚಿಕೆ ಮಾಡಿದ್ದು, ಹಾಲಿ, ಮಾಜಿ ಶಾಸಕರುಗಳನ್ನ ಕೈ ಬಿಟ್ಟಿದ್ದು ಹೊಸಬರಿಗೆ ಮಣೆ ಹಾಕಲಾಗಿದೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೋವಿ ಸಮುದಾಯದ ಕೆಲ ಶಾಸಕರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಬೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಕಿಡಿಕಾರಿದ್ದಾರೆ.
ಬಿಜೆಪಿಯಿಂದ ಅರವಿಂದ ಲಿಂಬಾವಳಿ, ಗೂಳಿಹಟ್ಟಿ ಶೇಖರ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಅಖಂಡ ಶ್ರೀನಿವಾಸ್ ಅವರನ್ನ ಕಡೆಗಣನೆ ಮಾಡಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಈ ಇಬ್ಬರು ನಾಯಕರು ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಕಾಂಗ್ರೆಸ್ನಿಂದ ಅಖಂಡ ಶ್ರೀನಿವಾಸ್ ಹೆಚ್ಚಿನ ಅಂತರದಿಂದ ದಾಖಲೆಯ ಗೆಲುವು ಸಾಧಿಸಿದ್ದರು. ಆದರೀಗ ಈ ಎರಡು ಪಕ್ಷಗಳು ಇವರನ್ನ ಕಡೆಗಣಿಸಿದ್ದರ ಕುರಿತು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೆವು. ಈ ಹಿಂದೆ 8-10 ಜನ ಬೋವಿ ಸಮುದಾಯದವರಿಗೆ ಟಿಕೆಟ್ ನೀಡುತ್ತಿದ್ದರು. ಅದರಂತೆ ಸಾಮಾಜಿಕ ನ್ಯಾಯದಡಿ ಟಿಕೆಟ್ ನೀಡಬೇಕು. ಅರವಿಂದ ಲಿಂಬಾವಳಿ, ಗೂಳಿಹಟ್ಟಿ ಶೇಖರ್ಗೆ ಬಿಜೆಪಿ ಹಾಗೂ ಅಖಂಡ ಶ್ರೀನಿವಾಸ್ಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಆಗ್ರಹಿಸಿದ್ದಾರೆ. ಇಲ್ಲವಾದರೆ ಬೋವಿ ಸಮುದಾಯ ಕಡೆಗಣಿಸಿದ ಪಕ್ಷಗಳನ್ನು ನಮ್ಮ ಸಮುದಾಯ ಕೈಬಿಡಲಿದ್ದು, ಬೋವಿ ಸಮಾಜದ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
