ವರುಣಾದಲ್ಲಿ ಅನಿರೀಕ್ಷಿತವಾಗಿ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿರುವ ಸಚಿವ ಸೋಮಣ್ಣಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಕಳೆದ ಬಾರಿ ವರುಣಾದಲ್ಲಿ ಸಿದ್ದರಾಮಯ್ಯ ಎದುರು ಸ್ಪರ್ಧಿಸಿ ಸೋತಿದ್ದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದಾರೆ.
ಈ ಬಾರಿ ವರುಣಾದಿಂದ ಬಸವರಾಜು ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಪಕ್ಷದ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಪಕ್ಷ ತಮಗೆ ಟಿಕೆಟ್ ನೀಡುತ್ತದೆ ಎಂದು ಅವರು ಈಗಾಗಲೇ ಚುನಾವಣೆ ಎದುರಿಸಲು ತಯಾರಿ ನಡೆಸಿಕೊಂಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಸೋಮಣ್ಣ ಅವರಿಗೆ ವರುಣಾ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಬಿವೈ ವಿಜಯೇಂದ್ರ ನಿಂತರೆ ಬೆಂಬಲಿಸುವುದಾಗಿ ಹೇಳಿದ್ದ ಸ್ಥಳೀಯ ಟಿಕೆಟ್ ನಾಯಕರೂ ಸೋಮಣ್ಣ ಆಗಮನದಿಂದ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಅಸಮಾಧಾನ ಶಮನಗೊಳಿಸಲು ವಿ. ಸೋಮಣ್ಣ ಮುಂದಾಗಿದ್ದು, ಕ್ಷೇತ್ರಕ್ಕೆ ಹೊರಗಿನವರು ಎಂಬುದು ಸ್ಥಳಿಯವಾಗಿ ಚರ್ಚೆ ನಡೆಯುತ್ತಿದೆ.
