Saturday, April 18, 2026
Homeಬೆಂಗಳೂರುಪ್ರಧಾನಿ ಮೋದಿ ಉದ್ಘಾಟಿಸಿದ್ದ ಮೆಟ್ರೋ ನಿಲ್ದಾಣ :ಎರಡೇ ವಾರಕ್ಕೆ ಜಲಾವೃತ!

ಪ್ರಧಾನಿ ಮೋದಿ ಉದ್ಘಾಟಿಸಿದ್ದ ಮೆಟ್ರೋ ನಿಲ್ದಾಣ :ಎರಡೇ ವಾರಕ್ಕೆ ಜಲಾವೃತ!

ಬೆಂಗಳೂರು: ಕೇವಲ ಎರಡು ವಾರಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಉದ್ಘಾಟಿಸಿದ್ದ ಮೆಟ್ರೋ ನಿಲ್ದಾಣ ಅಲ್ಪ ಮಳೆಗೇ ಸಂಪೂರ್ಣ ಜಲಾವೃತಗೊಂಡಿದೆ. ವೈಟ್ ಫೀಲ್ಡ್ –ಕೆ.ಆರ್.ಪುರ ಮಾರ್ಗದ ನಲ್ಲೂರಹಳ್ಳಿ ಮೆಟ್ರೋ ಸ್ಟೇಷನ್ ಟಿಕೆಟ್ ಕೌಂಟರ್ ಬಳಿ ಸಂಪೂರ್ಣ ನೀರು ನಿಂತಿದೆ. ಮಾ. 25 ರಂದು ಪ್ರಧಾನಿ ನರೇಂದ್ರ ಮೋದಿ 13.5 ಕಿ.ಮೀ ಉದ್ದದ ಈ ಮಾರ್ಗವನ್ನು ಲೋಕಾರ್ಪಣೆಗೊಳಿಸಿದ್ದರು. ಕೇವಲ ಎರಡು ವಾರಕ್ಕೂ ಕಡಿಮೆ ಅಂತರದಲ್ಲಿ ಕಾಮಗಾರಿ ದೋಷ ಕಂಡು ಬಂದಿರುವುದು ಸಾರ್ವಜನಿಕರು ಮತ್ತು ಮೆಟ್ರೋ ಪ್ರಯಾಣಿಕರಲ್ಲಿ ಆಕ್ರೋಶ ಮೂಡಿಸಿದೆ.
ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಲ್ಲಿ ಅರ್ಧ ತಾಸು ಅಕಾಲಿಕ ಅಲ್ಪಮಳೆ ಸುರಿದಿತ್ತು. ಜನರ ಆತಂಕಕ್ಕೆ ಕೊಂಚವೂ ಕಾರಣವಿಲ್ಲದ ಬೇಸಿಗೆಯ ಮಳೆಗೇ ಮೆಟ್ರೋ ನಿಲ್ದಾಣದ ಕಾಮಗಾರಿಯ ಗುಣಮಟ್ಟ ಬಯಲಾಗಿದೆ. ಟಿಕೆಟ್ ಕೌಂಟರ್ ಬಳಿ ಮಳೆನೀರು ನಿಂತಿದ್ದರೆ, ಲಿಫ್ಟ್ ಬಳಿ ಮಳೆನೀರು ಜಲಪಾತದಂತೆ ಸುರಿಯುತ್ತಿದೆ. ಈ ಕುರಿತು ಇದುವರೆಗೂ ಯಾವುದೇ ಮೆಟ್ರೋ ಅಧಿಕಾರಿಗಳು ಸ್ಪಷ್ಟೀಕರಣ ನೀಡಿಲ್ಲ.

ಹೆಚ್ಚಿನ ಸುದ್ದಿ