ದೇಶಿ ಕ್ರೀಡೆಗೆ ಭರ್ಜರಿ ಉತ್ತೇಜನ: 3ನೇ ವರ್ಷಕ್ಕೆ ಕಾಲಿಟ್ಟ ಒಡಿಶಾ ಎಎಮ್/ಎನ್ಎಸ್ ಖೋ ಖೋ ಕೇಂದ್ರ, 19 ಹೊಸ ಪ್ರತಿಭೆಗಳ ಸೇರ್ಪಡೆ
ದೇಶಿ ಕ್ರೀಡೆ ‘ಖೋ ಖೋ’ದಲ್ಲಿ ಭರವಸೆಯ ಕ್ರೀಡಾಪಟುಗಳನ್ನು ರೂಪಿಸುತ್ತಿರುವ ‘ಒಡಿಶಾ ಎಎಮ್/ಎನ್ಎಸ್ ಇಂಡಿಯಾ ಖೋ ಖೋ ಹೈ ಪರ್ಫಾರ್ಮೆನ್ಸ್ ಸೆಂಟರ್’ ತನ್ನ ಕಾರ್ಯಾಚರಣೆಯ ಎರಡು ಯಶಸ್ವಿ ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಪುರಿಯಲ್ಲಿ ಆಯೋಜಿಸಿದ್ದ ಅದ್ಧೂರಿ ವಾರ್ಷಿಕೋತ್ಸವದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಜೊತೆಗೆ, ‘ಖೋ ಖೋ ಆಯ್ಕೆ ಪ್ರಕ್ರಿಯೆ-2026’ರ ಮೂಲಕ ಆಯ್ಕೆಯಾದ ಭರವಸೆಯ ಹೊಸ ಕ್ರೀಡಾಪಟುಗಳನ್ನು ಕೇಂದ್ರಕ್ಕೆ ಬರಮಾಡಿಕೊಳ್ಳಲಾಯಿತು.
ಎರಡು ವರ್ಷಗಳಲ್ಲಿ 48 ಪದಕಗಳ ಸಾಧನೆ
ಈ ತರಬೇತಿ ಕೇಂದ್ರವು ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಮತ್ತು ಒಡಿಶಾ ಸರ್ಕಾರದ ಜಂಟಿ ಯೋಜನೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಇಲ್ಲಿ ತರಬೇತಿ ಪಡೆದ ಕ್ರೀಡಾಪಟುಗಳು 30ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬರೋಬ್ಬರಿ 48 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಖೋ ಖೋ ವಿಶ್ವಕಪ್ 2025, ರಾಷ್ಟ್ರೀಯ ಕ್ರೀಡಾಕೂಟ 2025, ಖೇಲೋ ಇಂಡಿಯಾ ಯೂತ್ ಗೇಮ್ಸ್ 2025, ಹಾಗೂ ಜೂನಿಯರ್ – ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಂತಹ ಪ್ರತಿಷ್ಠಿತ ವೇದಿಕೆಗಳಲ್ಲಿ ಇಲ್ಲಿನ ಕ್ರೀಡಾಪಟುಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕೇಂದ್ರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಹೊಸ ಪ್ರತಿಭೆಗಳ ಸೇರ್ಪಡೆ
ಇದೇ ವೇಳೆ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ, ಕಿರಿಯ ಮತ್ತು ಹಿರಿಯ ವಿಭಾಗದ 31 ಕ್ರೀಡಾಪಟುಗಳು ಕೇಂದ್ರದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡರೆ, 19 ಹೊಸ ಪ್ರತಿಭೆಗಳನ್ನು (10 ಬಾಲಕರು ಮತ್ತು 9 ಬಾಲಕಿಯರು) ಹೊಸದಾಗಿ ಸ್ವಾಗತಿಸಲಾಯಿತು. ಹಳೆಯ ಕ್ರೀಡಾಪಟುಗಳು ಜೂನಿಯರ್ ಮತ್ತು ಸೀನಿಯರ್ ಹಂತಕ್ಕೆ ಬಡ್ತಿ ಪಡೆದಿರುವುದರಿಂದ ಸಬ್ – ಜೂನಿಯರ್ ವಿಭಾಗಕ್ಕೆ ಹೊಸಬರನ್ನು ಸೇರಿಸಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಎಎಮ್/ಎನ್ಎಸ್ ಇಂಡಿಯಾದ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಅಶುತೋಷ್ ತೆಲಂಗ್, “ಕೇವಲ ಎರಡು ವರ್ಷಗಳ ಅಲ್ಪಾವಧಿಯಲ್ಲಿಯೇ ಈ ಕೇಂದ್ರವು ಖೋ ಖೋ ಕ್ರೀಡೆಯಲ್ಲಿ ಶಿಸ್ತುಬದ್ಧ ತರಬೇತಿ ಕೇಂದ್ರವಾಗಿ ಬೆಳೆದಿದೆ. ಭವಿಷ್ಯದ ಚಾಂಪಿಯನ್‌ಗಳನ್ನು ರೂಪಿಸುವ ಹಾಗೂ ಭಾರತದ ಖೋ ಖೋ ಕ್ರೀಡೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಮ್ಮ ಬದ್ಧತೆ ಮುಂದುವರಿಯಲಿದೆ” ಎಂದರು.
ಭಾರತೀಯ ಪುರುಷರ ಖೋ ಖೋ ತಂಡದ ನಾಯಕ ಪ್ರತೀಕ್ ವೈಕರ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ಒಡಿಶಾ ಖೋ ಖೋ ಸಂಸ್ಥೆಯ ಕಾರ್ಯದರ್ಶಿ ಪ್ರದ್ಯುಮ್ನ ಮಿಶ್ರಾ, ಎಎಮ್/ಎನ್ಎಸ್ ಇಂಡಿಯಾದ ಡಾ. ದೇವಬ್ರತ ದಾಶ್, ಡಾ. ವಿಕಾಸ್ ಯಾದವೇಂದ್ರ ಹಾಗೂ ಸ್ಪೋರ್ಟ್ಸ್ ಫಾರ್ ಆಲ್ ಪ್ರಾಜೆಕ್ಟ್ ಹೆಡ್ ಸಾಗರ್ ಸಮಲ್ ಉಪಸ್ಥಿತರಿದ್ದರು.
ಸಾಧಕರಿಗೆ ಗೌರವ
ಕೇವಲ ಕ್ರೀಡೆಯಲ್ಲಿ ಮಾತ್ರವಲ್ಲದೆ, ಶಿಸ್ತು, ಶೈಕ್ಷಣಿಕ ಸಾಧನೆ ಹಾಗೂ ಸರ್ವತೋಮುಖ ಬೆಳವಣಿಗೆ ತೋರಿದ ಕ್ರೀಡಾಪಟುಗಳಿಗೆ ಈ ಸಂದರ್ಭದಲ್ಲಿ ವಿಶೇಷ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ನಡೆದ ಪ್ರದರ್ಶನ ಪಂದ್ಯದಲ್ಲಿ ಕ್ರೀಡಾಪಟುಗಳು ತಮ್ಮ ವೇಗ, ಚುರುಕುತನ ಹಾಗೂ ತಂತ್ರಗಾರಿಕೆಯನ್ನು ಪ್ರದರ್ಶಿಸುವ ಮೂಲಕ ನೋಡುಗರ ಗಮನ ಸೆಳೆದರು.
ಒಡಿಶಾವನ್ನು ಭಾರತದ ಪ್ರಮುಖ ‘ಖೋ ಖೋ’ ಹಬ್ ಆಗಿ ರೂಪಿಸುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿನ ಮೂಲಸೌಕರ್ಯಗಳನ್ನು ಒಡಿಶಾ ಸರ್ಕಾರ ನಿರ್ಮಿಸಿ ನಿರ್ವಹಿಸಿದರೆ, ಕ್ರೀಡಾಪಟುಗಳಿಗೆ ತರಬೇತಿ ನೀಡುವ ಹಾಗೂ ಕೇಂದ್ರವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಉಕ್ಕಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಎಎಮ್/ಎನ್ಎಸ್ ಸಂಸ್ಥೆ ಹೊತ್ತುಕೊಂಡಿದೆ. ಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂಸ್ಥೆ, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಶ್ವದರ್ಜೆಯ ಕ್ರೀಡಾಪಟುಗಳನ್ನು ದೇಶಕ್ಕೆ ನೀಡುವ ಯೋಜನೆ ಹೊಂದಿದೆ.
