ಮಹಿಳೆಯರ ಹಕ್ಕುಗಳಿಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಅಂಬೇಡ್ಕರ್: ಅಮರಯ್ಯ ಘಂಟಿ
ಲಿಂಗಸೂಗೂರು: ಸ್ವಾತಂತ್ರ್ಯ ನಂತರ ಭಾರತ ದೇಶದಲ್ಲಿ ಎಲ್ಲಾ ಜಾತಿ, ವರ್ಗದ ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆ, ಎಲ್ಲಾ ಕ್ಷೇತ್ರಗಳಲ್ಲಿ ಮುಕ್ತ ಸಮಾನ ಅವಕಾಶಗಳ ಹಕ್ಕುಗಳಿಗಾಗಿ ಹೋರಾಡಿ, ಸಂಸತ್ತಿನಲ್ಲಿ ಹಿಂದೂಕೋಡ್ ಬಿಲ್ ಮಂಡಿಸಿದಾಗ ಮೇಲ್ವಾರ್ಗದ ಮಹಿಳೆಯರು ಸೇರಿದಂತೆ ಅನೇಕರು ಅದನ್ನು ವಿರೋಧಿಸಿದಕ್ಕಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಎಂದು ಲಿಂಗಸೂಗೂರು ತಾಲೂಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಸಾಹಿತಿ ಅಮರಯ್ಯ ಘಂಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಲಿಂಗಸೂಗೂರು ಪಟ್ಟಣದ ವಾಡ್೯ ನಂ.05 ರಲ್ಲಿ ಕಾಳಪೂರ ಕ್ರಾಸ್ ಹತ್ತಿರ ಮಾನಮ್ಮ – ಕುಪ್ಪಣ್ಣ ಮೋತಿ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ, 119ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು.

ಅಂದು ಹಿಂದೂಕೋಡ್ ಬಿಲ್ ವಿರೋಧಿಸಿದ ಮೇಲ್ವಾರ್ಗದ ಮಹಿಳೆಯರೇ ಇಂದು ಹೆಚ್ಚು ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ದಲಿತ ಮಹಿಳೆಯರ ಬದುಕು ಇನ್ನೂ ಚಿಂತಜನಕವಾಗಿದೆ ಎಂದರು.
ಸಂಶೋಧಕರು ಹಾಗೂ ಚಿಂತಕರಾದ ಡಾ.ಚಂದ್ರಶೇಖರಪ್ಪ ವ್ಯಾಕರನಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಕ್ಷರ ವಂಚಿತ ಬಹುಸಂಖ್ಯಾತ ತಳ ಸಮುದಾಯದ ಜನರು ಶೋಷಣೆಗೆ, ದೌರ್ಜನ್ಯಕ್ಕೆ, ಜಾತಿ ಕ್ರೌರ್ಯದಿಂದ ಅಸಮಾನತೆಗೆ ಒಳಗಾದ ಜನತೆಗೆ ಅವರ ಸಂಪೂರ್ಣ ಏಳ್ಗೆಗಾಗಿ ಶಿಕ್ಷಣವೆಂಬ ಅಸ್ತ್ರವನ್ನು ಸಂವಿಧಾನಬದ್ಧವಾಗಿ ನೀಡಿದವರು ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಎಂದರು.
ಪ್ರಾಸ್ತಾವಿಕವಾಗಿ ಬಹುಜನ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ ಮಾತನಾಡಿ ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಎರಡು ಕನಸುಗಳು ಒಂದು ಬಹುಜನರು ಆಳುವ ವರ್ಗವಾಗಬೇಕು. ಇನ್ನೂಂದು ಸಾಂಸ್ಕೃತಿಕವಾಗಿ ಬದಲಾಗಬೇಕು ಎನ್ನುವುದನ್ನು ನೆನಸು ಮಾಡಲು ಬಹುಜನರು ಪ್ರಯತ್ನಿಸಬೇಕು ಎಂದರು.
ಕುಟುಂಬದ ಮುಖ್ಯಸ್ಥ ಕುಪ್ಪಣ್ಣ ಮೋತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವಕ ರಮೇಶ ಮೋತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಬಹುಜನ ಸಂಘರ್ಷ ಸಮಿತಿ ಲಿಂಗಸೂಗೂರು ತಾಲೂಕಾಧ್ಯಕ್ಷ ಜಿ.ಸೋಮನಾಥನಾಯಕ ಬಲ್ಲಟಗಿ, ಅರಕೇರಾ ತಾಲೂಕಾಧ್ಯಕ್ಷ ಬಸವರಾಜ ಮರಕಂದಿನ್ನಿ, ಅಲೆಮಾರಿ ಸಮುದಾಯದ ಯುವ ಮುಖಂಡ, ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊಡಗಂಟಿ, ರೈತ ಹೋರಾಟಗಾರ ಹನುಮಂತ ನಾಗಲಪೂರ, ಸೋಮಣ್ಣ ಸಂಕಲ್, ಹನುಮಂತ ಮೋತಿ, ಯಂಕಮ್ಮ, ಗುರುಲಿಂಗ ಸೇರಿದಂತೆ ಕುಟುಂಬಸ್ಥರು ಭಾಗವಹಿಸಿದ್ಧರು.
