Friday, June 19, 2026
Homeರಾಜ್ಯಸಚಿವ ಸ್ಥಾನ ನೀಡದಿದ್ದರೆ ಮುದ್ದೇಬಿಹಾಳದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ್‌ ನೆಲಕಚ್ಚುವುದು ಗ್ಯಾರೆಂಟಿ: ವಾಯ್.ಎಚ್.ವಿಜಯಕರ...!!! ಮುದ್ದೇಬಿಹಾಳ ಬಂದ್‌...

ಸಚಿವ ಸ್ಥಾನ ನೀಡದಿದ್ದರೆ ಮುದ್ದೇಬಿಹಾಳದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ್‌ ನೆಲಕಚ್ಚುವುದು ಗ್ಯಾರೆಂಟಿ: ವಾಯ್.ಎಚ್.ವಿಜಯಕರ…!!! ಮುದ್ದೇಬಿಹಾಳ ಬಂದ್‌ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ:
ಜೆಡಿಎಸ್ ಪಕ್ಷಕ್ಕೆ ಸೀಮಿತವಾಗಿದ್ದ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಿಂದ ತಲಹಂತದ ಚುನಾವಣೆಯಿಂದ ವಿಧಾನಸಭಾ ಚುನಾವಣೆಯವರೆಗೂ ಪಕ್ಷವನ್ನು ಸಂಘಟಿಸಿ ಮುದ್ದೇಬಿಹಾಳ ಕ್ಷೇತ್ರವನ್ನು ಕಾಂಗ್ರೇಸ್ ತೆಕ್ಕೆಗೆ ತೆಗೆದುಕೊಂಡ ಹಿರಿಮೆ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಅವರದು. ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಮುಂದಿನ ಚುನಾವಣೆ ಕಾಂಗ್ರೇಸ್ ನೆಲಕಚ್ಚುವುದು ಗ್ಯಾರೆಂಟಿ ಎಂದು ಮುಖಂಡ ವಾಯ್.ಎಚ್.ವಿಜಯಕರ ಹೇಳಿದರು.
ಪಟ್ಟಣದಲ್ಲಿ ಶಾಸಕ ಅಪ್ಪಾಜಿ ಸಿ.ಎಸ್.ನಾಡಗಡೌ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ನಡೆದ ನಾಗರಿಕರು ಸ್ವಯಂ ಘೋಷಿಸಿದ ಮುದ್ದೇಬಿಹಾಳ ಬಂದ್ ಕರೆಗೆ ಬೆಂಬಲಿಸಿ ವಿವಿಧ ಮುಖಂಡರು ಹಾಗೂ ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳು ಬಸವೇಶ್ವರ ವೃತ್ತದಲ್ಲಿ ಮಾತನಾಡಿದರು.
ಒಂದು ವೇಳೆ ನಾಡಗೌಡ ಅವರಿಗೆ ಸಚಿವಸ್ಥಾನ ನೀಡದಿದ್ದರೆ ಕ್ಷೇತ್ರದಲ್ಲಿ ಪಕ್ಷದ ನಾನಾ ಹುದ್ದೆಯಲ್ಲಿರುವ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಾಮೂಹಿಕವಾಗಿ ರಾಜಿನಾಮೆ ನೀಡಬೇಕಾಗುತ್ತದೆ ಎಂದು ವಾಯ್.ಎಚ್.ವಿಜಯಕರ್ ಎಚ್ಚರಿಸಿದರು.


ಮುಖಂಡ ಸುರೇಶಗೌಡ ಪಾಟೀಲ ಮಾತನಾಡಿ, 40 ವರ್ಷದಂದ ಶಾಂತಿಯುತವಾಗಿ ಪಕ್ಷಕ್ಕೆ ಯಾವುದೇ ದಕ್ಕೆಯಾಗದಂತೆ ಪಕ್ಷ ಸಿದ್ಧಾಂತವನ್ನು ಪಾಲಿಸುತ್ತಾ ಬಂದಿರುವ ಉತ್ತರ ಕರ್ನಾಟಕದ ಹಿರಿಯ ರಾಜಕಾರಣಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಮುದ್ದೇಬಿಹಾಳ ಕ್ಷೇತ್ರದಲ್ಲಿ ಕೆರೆಯ ಕಟ್ಟೆ ಒಡೆದಂತಾಗುತ್ತದೆ ಎಂಬುವುದು ಕಾಂಗ್ರೇಸ್ ಪಕ್ಷದ ಹೈಕಮಾಂಡ್ ತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.
ರಾಜ್ಯ ಸರಕಾರದ ಗ್ಯಾಮರೆಂಟಿ ಸಮೀತಿ ತಾಲೂಕಾಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಮಾತನಾಡಿ, ರಾಜ್ಯದ ಕಾಂಗ್ರೇಸ್ ಪಕ್ಷದ ಎಲ್ಲಾ ಶಾಸಕರಲ್ಲಿಯೂ ನಮ್ಮ ಸಿ.ಎಸ್.ಅಪ್ಪಾಜಿ ನಾಡಗೌಡ ಅವರು ತಮ್ಮ 40 ವರ್ಷದ ರಾಜಕಾರಣದಲ್ಲಿ ಯಾವುದೇ ಒಂದು ಕಪ್ಪುಚುಕ್ಕೆ ಇಲ್ಲದ ರಾಜಕಾರಣಿಯಾಗಿದ್ದಾರೆ. ಅಲ್ಲದೇ ಪ್ರತಿ ಬಾರಿಯೂ ಸಚಿವ ಸ್ಥಾನದ ಪಟ್ಟಿಯಲ್ಲಿದ್ದ ಇವರನ್ನು ಪಕ್ಷದ ನಿಲುವಿಗಾಗಿ ಕೊನೆಯ ಗಳಿಗೆಯಲ್ಲಿ ಕೈಬಿಟ್ಟರೂ ಪಕ್ಷದ ವಿರುದ್ಧ ಯಾವುದೇ ಮಾತು ಹೇಳದೇ ಪಕ್ಷಕ್ಕೆ ಪ್ರಾಮಾಣಿಕವಾಗಿರುವ ಇವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಮುದ್ದೇಬಿಹಾಳ ಕ್ಷೇತ್ರದಲ್ಲಿ ಪಕ್ಷದ ಸರ್ವ ಸದಸ್ಯರೂ ರಾಜಿನಾಮೆ ನೀಡಬೇಕಾಗುತ್ತದೆ ಎಂದು ಹೇಳಿದರು.


ಕಾಂಗ್ರೇಸ್ ಪಕ್ಷದ ಯುವ ಮುಖಂಡ ಶರಣಸಬು ಚಲವಾದಿ ಮಾತನಾಡಿ, ಚುನಾವಣೆಯಲ್ಲಿ ಮಾತ್ರ ಚುನಾವಣೆಯನ್ನು ಮಾಡಿ ನಂತರ ದಿನಗಳಲ್ಲಿ ಎಲ್ಲರೂ ನಮ್ಮವರೇ ಎಂಬ ಭಾವನೆಯನ್ನು ಹೊಂದಿದವರು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಎಂಬುವುದಕ್ಕೆ ಮುದ್ದೇಬಿಹಾಳ ಪಟ್ಟಣದ ಜನ ಇಂದು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ತಮ್ಮ ಒಂದು ದಿನದ ವ್ಯಾಪಾರ ವಹಿವಾಟನ್ನು ಬದಿಗಿಟ್ಟಿರುವುದೇ ಸಾಕ್ಷಿಯಾಗಿದೆ. ಇಂತಹ ಅಜಾತಶತ್ರು ವ್ಯಕ್ತಿಗೆ ಸಚಿವ ಸ್ಥಾನ ದೊರಕದಿದ್ದರೆ ಕ್ಷೇತ್ರದಲ್ಲಿ ಪಕ್ಷಕ್ಕೆ ಯಾವುದೇ ಮರ್ಯಾದೆ ಇರುವುದಿಲ್ಲ ಎಂದು ಹೇಳಿದರು.
ಪಕ್ಷದ ಯುವ ಮುಖಂಡ ತಿಪ್ಪಣ್ಣ ದೊಡ್ಡಮನಿ ಮಾತನಾಡಿ, ಕ್ಷೇತ್ರದಲ್ಲಿ 40 ವರ್ಷಗಳಿಂದ ರಾಜಕಾರಣದ ಅನುಭವ ಹೊಂದಿರುವ ಶಾಸಕ ಸಿ.ಎಸ್.ನಾಡಗೌಡ ಅವರಿಗೆ ಸಚಿವಗಿರಿ ಅಗತ್ಯವಿಲ್ಲ. ಮುದ್ದೇಬಿಹಾಳ ಕ್ಷೇತ್ರದ ದೀನ ದಲಿತರಿಗೆ, ಸಾಮಾನ್ಯ ಕಾರ್ಯಕರ್ತರಿಗೆ ಸಚಿವಸ್ಥಾನ ಬೇಕಾಗಿದೆ. ಅಪ್ಪಾಜಿ ನಾಡಗೌಡ ಅವರು ರಾಜಕೀಯ ಅನುಭವದಿಂದ ಈಗಾಗಲೇ ಸಚಿವರಾಗಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ಉಳಿವಿಕೆಗಾಗಿ ಸಚಿವಗಿರಿ ಅಗತ್ಯವಾಗಿದೆ ಎಂಬುವುದು ಪಕ್ಷದ ವರಿಷ್ಠರು ತಿಳಿದುಕೊಳ್ಳಬೇಕಿದೆ ಎಂದ ಹೇಳಿದರು.


ಬ್ಲಾಕ್ ಕಾಂಗ್ರೇಸ್ ತಾಲೂಕಾಧ್ಯಕ್ಷ ಗುರುಣ್ಣ ತಾರನಾಳ ಮಾತನಾಡಿದರು, ಜಿಲ್ಲೆಯಲ್ಲಿಯೇ ಸರಳ ಸಜ್ಜನಿಕ ರಾಜಕಾರಣಿ ಮಾಡುತ್ತಾ ಬಂದು ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಶ್ರಮಿಸಿದ ಶಾಸಕ ಅಪ್ಪಾಜಿ ನಾಡಗೌಡ ಅವರು. ಇಂತಹ ವ್ಯಕ್ತಿಗೆ ಸಾಕಷ್ಟು ಬಾರಿ ಸಚಿವ ಸ್ಥಾನದಿಂದ ವಂಚಿತರಾಗುವAತೆ ಕಾಣದ ಕೈಗಳು ಕೆಲಸ ಮಾಡುತ್ತಾ ಬಂದಿವೆ. ಇದರಿಂದ ಕ್ಷೇತ್ರದ ಜನರಿಗೆ ಪಕ್ಷದ ಮೇಲೆ ವಿಶ್ವಾಸವಿಲ್ಲದಂತಾಗಿದೆ. ಕೂಡಲೇ ನಾಡಗೌಡರಿಗೆ ಸಚಿವ ಸ್ಥಾನವನ್ನು ನೀಡಿ ಮುದ್ದೇಬಿಹಾಳ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ಉಳಿವಿಕೆಗಾಗಿ ಶ್ರಮಿಸಬೇಕು ಎಂದು ಹೇಳಿದರು.
ಕಾಂಗ್ರೇಸ್ ಪಕ್ಷದ ಮಹಿಳಾ ಘಟಕದ ಸದಸ್ಯೆ ಸರಸ್ವತಿ ಪೀರಾಪೂರ, ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ತಲಹದಿಯಿಂದ ಸಂಘಟಿಸಿ ಭದ್ರಬುನಾದಿ ಕ್ಷೇತ್ರವನ್ನು ಮಾಡಿದ ಹಿರಿಮೆ ಶಾಸಕ ನಾಡಗೌಡ ಅವರಿಗೆ ಸಲ್ಲುತ್ತದೆ. ಇಂತಹ ಸರಳಸಜ್ಜನಿಕ ವ್ಯಕ್ತಿಗೆ ಸಂಪುಟದಲ್ಲಿ ಸ್ಥಾನಮಾನ ನೀಡದಿರುವುದು ವಪರ್ಯಾಸದ ಸಂಗತಿಯಾಗಿದೆ. ರಾಜ್ಯ ಸರಕಾರದ ಎರಡನೇ ಸಂಪುಟ ಪಟ್ಟಿಯಿಂದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರನ್ನು ಕೈಬಿಟ್ಟರೆ ನಾವು ಆತ್ಮಹತ್ಯಗೂ ಮುಂದಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ ಮೆರವಣಿಗೆಯು ಇಂದಿರಾ ವೃತ್ತ, ದ್ಯಾಮವ್ವನ ಕಟ್ಟೆ ಮೂಲಕ ಬಸವೇಶ್ವರ ವೃತ್ತದ ವರೆಗೂ ಶಾಂತಿಯುತವಾಗಿ ನಡೆಸಲಾಯಿತು.
ಯಶಸ್ವಿಯಾದ ಸ್ವಯಂ ಘೋಷಿತ ಬಂದ್:
ಮುದ್ದೇಬಿಹಾಳ ಬ್ಲಾಕ್ ಕಾಂಗ್ರೇಸ್ ತಾಲೂಕಾಧ್ಯಕ್ಷ ಗುರುಣ್ಣ ತಾರನಾಳ ಇತ್ತಿಚಿಗಷ್ಟೆ ಕ್ಷೇತ್ರವನ್ನು ಬಂದ್ ಮಾಡುವ ಮೂಲಕ ಪಕ್ಷದ ಹೈಕಮಾಂಡ್‌ಗೆ ಕ್ಷೇತ್ರದ ಕಾರ್ಯಕರ್ತರ ನಿಲುವನ್ನು ತೋರಿಸಬೇಕು ಎಂಬ ಕರೆಗೆ ಬೆಂಬಲಿಸಿದ ಪಟ್ಟಣದ ಎಲ್ಲ ವ್ಯಾಪಾರಸ್ಥರು, ಗಣ್ಯ ಉದ್ಯಮಿದಾರರು ಹಾಗೂ ಸಂಘ ಸಂಸ್ಥೆಯವರು ಶುಕ್ರವಾರ ಮುದ್ದೇಬಿಹಾಳ ಪಟ್ಟಣವನ್ನು ಬಂದ್ ಮಾಡಿ ಕಾಂಗ್ರೇಸ್ ಪಕ್ಷಕ್ಕೆ ಪಕ್ಷಾತೀತವಾಗಿ ಅಪ್ಪಾಜಿ ಸಿ.ಎಸ್.ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡಲು ಮನವಿ ಮಾಡೊಣ ಎಂದು ಸ್ವಯಂ ಘೋಷಿಸಿದ್ದರು. ಅದರಂತೆ ಶುಕ್ರವಾರ ಪಟ್ಟಣದ ಎಲ್ಲ ವ್ಯಾಪಾರಸ್ಥರೂ ತಮ್ಮ ಒಂದು ದಿನದ ವ್ಯಾಪಾ ವಹಿವಾಟುಗಳನ್ನು ಸ್ಥಗಿತಗೊಳಿಸಿ ಬಂದ್ ಯಶಸ್ವಿಗೊಳಿಸಿದರು.
ಪ್ರಯಾಣಿಕರ ಪರದಾಟ:
ಬುಧವಾರವೇ ಬಂದ್ ಘೋಷಣೆಯಾದ ಹಿನ್ನೆಲೆ ಸಾರಿಗೆ ಇಲಾಖೆ ವ್ಯವಸ್ಥಾಪಕರು ಮುನ್ನೆಚ್ಚರಿಕೆ ಅಂಗವಾಗಿ ಬಸ್ ಸಂಚಾರವನ್ನು ಪಟ್ಟಣದ ಒವ ಪ್ರವೇಶವನ್ನು ಮಾತ್ರ ಸ್ಥಗಿತಗೊಳಿಸಿ ಗ್ರಾಮೀಣ ಭಾಗದಿಂದ ಬರು ಪ್ರಯಾಣಿಕರನ್ನು ಪಟ್ಟಣದ ಹೊರವಲಯದಲ್ಲಿ ಇಳಿದುಕೊಳ್ಳುವ ಅವಕಾಶ ಮಾಡಿಕೊಟ್ಟಿದ್ದರು. ಇದರಿಂದ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡಿದರು.


ಟಾಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ:
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜನರನ್ನು ಉದ್ದೇಶಿಸಿ ಪಕ್ಷದ ಮುಖಂಡರು ಮಾತನಾಡುತ್ತಿರುವ ಸಂದರ್ಭದಲ್ಲಿ ಆಲಿಮಟ್ಟಿ ರಸ್ತೆಯಲ್ಲಿ ಯುವಕರು ಟಾಯರ್‌ಗೆ ಬೆಂಕಿ ಹಚ್ಚುವ ಮೂಲಕ ನಾಡಗೌಡ ಅವರಿಗೆ ಸಚಿವ ಸ್ಥಾನ ಸಿಗಲೇಬೇಕೆಂದು ಸಿಎಂ ಡಿ.ಕೆ.ಶಿವಕುಮಾರ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ ಅವರಿಗೆ ಒತ್ತಾಯಿಸಿದರು. ಆದರೆ ಈ ಘಟನೆಯಲ್ಲಿ ಯಾವುದೇ ರೀತಿಯ ಹಾನಿಕರವಾಗದಂತೆ ಪೋಲಿಸರು ಎಚ್ಚರವಹಿಸಿದರು.
ಪೋಲಿಸ್ ಬೀಗಿಬಂದೂಬಸ್ತ್:
ಮುದ್ದೇಬಿಹಾಳ ಪಟ್ಟಣದ ಶುಕ್ರವಾರ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಸಿಪಿಐ ಮೊಹ್ಮ್ ಫಸಿವುದ್ದೀನ್ ಹಾಗೂ ಪಿಎಸ್‌ಐ ಸಂಜಯ ತಿಪ್ಪರಡ್ಡಿ ಅವರು, ಕೂಡಗಿ, ನಿಡಗುಂದಿ, ಬ.ಬಾಗೇವಾಡಿ, ತಾಳಿಕೋಟಿ ಠಾಣೆಯಿಂದ ಹೆಚ್ಚುವರಿ ಪೋಲಿಸ್ ಸಿಬ್ಬಂದಿಗಳನ್ನು ಹಾಗೂ ವಿಜಯಪುರ ಜಿಲ್ಲೆಯಿಂದ ಶಷತ್ರ ಮೀಸಲುಪಡೆಯಿಂದ ಶುಕ್ರವಾರ ಬೀಗಿಬಂದೂಬಸ್ತ್ ಒದಗಿಸಿದ್ದರ. ಬಾಪುರಾಯ ದೇಸಾಯಿ(ಹಡಗಲಿ), ಬಿ.ಕೆ.ಬಿರಾದಾರ, ಸಂಗನಗೌಡ ಬಿರಾದರ(ಜಿಟಿಸಿ), ಕಾಮರಾಜ ಬಿರಾದಾರ, ಶಿವಪ್ಪಗೌಡ ತಾತರಡ್ಡಿ, ಮಲ್ಲಿಕಾರ್ಜುನ ಅಪರಾಧಿ, ಸಿ.ಎಲ್.ಬಿರಾದರ, ಎಸ್.ಎಸ್.ಮಾಲಗತ್ತಿ, ಶ್ರೀಶೈಲ ಮರೋಳ, ರಾಜು ಕೊಂಗಿ, ಬಸವರಾಜ ಇಸ್ಲಾಂಪೂರ, ಆಶೋಕ ಚೆಟ್ಟೆರ, ಮೈಬೂಬ ಗೊಳಸಂಗಿ, ಶಿವಗೌಡ ತಾಳಿಕೋಟಿ, ಪ್ರದೀಪ ನಾಡಗೌಡ, ಸದು ಮಠ, ಸಂಗನಗೌಡ ಪಾಟೀಲ, ಕೆ.ಎಸ್.ಪಾಟೀಲ, ಬಾಪುಗೌಡ ಪೀರಾಪೂರ, ಅಮರೇಶ ಗೂಳಿ, ಬಸವರಾಜ ಭಜಂತ್ರಿ ಸೇರಿದಂತೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿದ್ದರು.

ಹೆಚ್ಚಿನ ಸುದ್ದಿ