Wednesday, August 5, 2026
Homeರಾಜ್ಯಕಾನೂನು ಮಾಪನ ಶಾಸ್ತ್ರ ಇಲಾಖೆಯ ಬಲವರ್ಧನೆಗಾಗಿ ವಿವಿಧ ಹಂತದ ಹುದ್ದೆಗಳ ಸೃಜನೆ ಹಾಗೂ ಗ್ರಾಹಕರ ಹಿತರಕ್ಷಣೆಗಾಗಿ...

ಕಾನೂನು ಮಾಪನ ಶಾಸ್ತ್ರ ಇಲಾಖೆಯ ಬಲವರ್ಧನೆಗಾಗಿ ವಿವಿಧ ಹಂತದ ಹುದ್ದೆಗಳ ಸೃಜನೆ ಹಾಗೂ ಗ್ರಾಹಕರ ಹಿತರಕ್ಷಣೆಗಾಗಿ ತಪಾಸಣೆ ನಡೆಸಲು 17 ನೂತನ ವಾಹನಗಳ ಹಂಚಿಕೆ ಆಹಾರ ಸಚಿವ ಕೆಹೆಚ್. ಮುನಿಯಪ್ಪ

ಕಾನೂನು ಮಾಪನ ಶಾಸ್ತ್ರ ಇಲಾಖೆಯ ಬಲವರ್ಧನೆಗಾಗಿ ವಿವಿಧ ಹಂತದ ಹುದ್ದೆಗಳ ಸೃಜನೆ ಹಾಗೂ ಗ್ರಾಹಕರ ಹಿತರಕ್ಷಣೆಗಾಗಿ ತಪಾಸಣೆ ನಡೆಸಲು 17 ನೂತನ ವಾಹನಗಳ ಹಂಚಿಕೆ ಆಹಾರ ಸಚಿವ ಕೆಹೆಚ್. ಮುನಿಯಪ್ಪ

ಆಹಾರ ನಿಗಮಕ್ಕೆ ಆಯ್ಕೆಯಾದ ನೂತನ 376 ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಣೆ

ಅನ್ನಭಾಗ್ಯ ಯೋಜನೆಯ ಮೂಲಕ ಹಸಿವು ಮುಕ್ತ ರಾಜ್ಯ ನಿರ್ಮಾಣ ನಮ್ಮ ಸರ್ಕಾರದ ಸಂಕಲ್ಪ

ಕಾಲಸಂತೆಯನ್ನು ತಡೆಯಲು ಕಟ್ಟು ನಿಟ್ಟಿನ ಕ್ರಮ,50 ಕೋಟಿರೂಗಳ ವೆಚ್ಚದಲ್ಲಿ ಆಹಾರ ಸೌಧ ನಿರ್ಮಾಣಕಾರ್ಯ ಪ್ರಗತಿಯಲ್ಲಿ

ವಿಧಾನ ಸೌಧ16
👇
ವಿಧಾನ ಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗ ಮಾನ್ಯ ಆಹಾರ ಸಚಿವರಾದ ಕೆ.ಹೆಚ್.ಮುನಿಯಪ್ಪ ರವರು ಕಾನೂನು ಮಾಪನ‌ ಶಾಸ್ತ್ರ ಇಲಾಖೆಯ 17 ಗ್ರಾಹಕ ಜಾಗೃತಿ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ನಂತರ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಯುವ ಶಕ್ತಿ ಉದ್ಯೋಗ ಸಬಲೀಕರಣ ನೇಮಕಾತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಸಿ ಆಹಾರ ನಿಗಮದ ನೂತನ 376 ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಸಚಿವರು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಕಳೆದ ಮೂರು ವರ್ಷಗಳಲ್ಲಿ ಆಹಾರ ಭದ್ರತೆ, ಅನ್ನಭಾಗ್ಯ ಗ್ಯಾರಂಟಿ ಯೋಜನೆ, ಕನಿಷ್ಠ ಬೆಂಬಲ ಬೆಲೆ (MSP) ಅಡಿಯಲ್ಲಿ ರೈತರಿಂದ ಧಾನ್ಯ ಖರೀದಿ, ಡಿಜಿಟಲ್ ಆಡಳಿತ, ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆ, ಕಾಳಸಂತೆ ನಿಯಂತ್ರಣ ಹಾಗೂ ಆಡಳಿತಾತ್ಮಕ ಸುಧಾರಣೆಗಳ ಮೂಲಕ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠ, ಪಾರದರ್ಶಕ ಮತ್ತು ಜನಸ್ನೇಹಿಯನ್ನಾಗಿ ರೂಪಿಸಿದೆ. ಇಲಾಖೆಯ ಪ್ರಮುಖ ಸಾಧನೆಗಳು ಈ ಕೆಳಗಿನಂತಿವೆ.

ಆಹಾರ ಭದ್ರತಾ ಫಲಾನುಭವಿಗಳ ವಿವರ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA)ಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಕೇಂದ್ರ ಸರ್ಕಾರದ 1,08,95,138 ಎಎವೈ/ ಪಿಎಚ್‌ಎಚ್ ಪಡಿತರ ಚೀಟಿಗಳ ಮೂಲಕ 4,02,03,247 ಫಲಾನುಭವಿಗಳು ಹಾಗೂ ರಾಜ್ಯ ಸರ್ಕಾರದ 16,13,266 ಪಿಎಚ್‌ಎಚ್ ಪಡಿತರ ಚೀಟಿಗಳ ಮೂಲಕ 43,48,046 ಫಲಾನುಭವಿಗಳು ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ 1,25,08,404 ಎಎವೈ/ ಪಿಎಚ್‌ಎಚ್ ಪಡಿತರ ಚೀಟಿಗಳ ಮೂಲಕ 4,45,51,293 ಫಲಾನುಭವಿಗಳು ಆಹಾರ ಭದ್ರತಾ ಸೌಲಭ್ಯ ಪಡೆಯುತ್ತಿದ್ದಾರೆ.

ಒಟ್ಟಾರೆಯಾಗಿ ಕರ್ನಾಟಕದ 65.96 ಶೇಕಡಾ ಜನಸಂಖ್ಯೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಇದು ದೇಶದ ಹಲವು ರಾಜ್ಯಗಳಿಗಿಂತ ಹೆಚ್ಚಿನ ವ್ಯಾಪ್ತಿಯಾಗಿದೆ. ಬಡವರು ಹಾಗೂ ಅರ್ಹ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಅನ್ನಭಾಗ್ಯ ಗ್ಯಾರಂಟಿ ಯೋಜನೆ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಗ್ಯಾರಂಟಿ ಯೋಜನೆಯಡಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ದೊರೆಯುವ 5 ಕೆ.ಜಿ. ಆಹಾರಧಾನ್ಯದ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

2023ರಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಅಕ್ಕಿ ಲಭ್ಯವಾಗದ ಹಿನ್ನೆಲೆಯಲ್ಲಿ ಜುಲೈ 2023ರಿಂದ ಡಿಸೆಂಬರ್ 2024ರವರೆಗೆ 72.02 ಕೋಟಿ ಫಲಾನುಭವಿಗಳಿಗೆ ಒಟ್ಟು ₹11,561.05 ಕೋಟಿ ಮೊತ್ತವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಜಮೆ ಮಾಡಲಾಗಿದೆ.

ಫೆಬ್ರವರಿ 2025ರಿಂದ 4,44,67,942 ಫಲಾನುಭವಿಗಳಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿಯನ್ನು ನೇರವಾಗಿ ವಿತರಿಸಲಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳು ಸುಮಾರು 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಎಫ್‌ಸಿಐನ OMSS(D) ಯೋಜನೆಯಡಿ ಖರೀದಿಸಿ ವಿತರಿಸಲಾಗುತ್ತಿದೆ.

ಸ್ಮಾರ್ಟ್ ಪಿಡಿಎಸ್ ಸುಧಾರಣೆ

ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿಸಲು ಸ್ಮಾರ್ಟ್ ಪಿಡಿಎಸ್ ಯೋಜನೆ ಜಾರಿಗೊಳಿಸ ಲಾಗುತ್ತಿದೆ. ಇದರಡಿ ಇ-ಪಾಸ್ ಯಂತ್ರಗಳು ಹಾಗೂ ಎಲೆಕ್ಟ್ರಾನಿಕ್ ತೂಕ ಯಂತ್ರಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಯೋಜನೆಯಿಂದ ಫಲಾನುಭವಿಗಳಿಗೆ ವೇಗದ, ನಿಖರ ಹಾಗೂ ವಿಶ್ವಾಸಾರ್ಹ ಸೇವೆ ದೊರೆಯಲಿದೆ.

ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆ

ಪಡಿತರ ಆಹಾರಧಾನ್ಯದ ಸಾಗಾಣಿಕೆ ಮತ್ತು ವಿತರಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ, ಗೋದಾಮುಗಳಿಗೆ ಸಿಸಿಟಿವಿ ವ್ಯವಸ್ಥೆ ಹಾಗೂ ಇಲಾಖೆಯಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಆಹಾರಧಾನ್ಯ ಸಾಗಾಣಿಕೆಯ ಚಲನವಲನದ ಮೇಲೆ ನೇರ ನಿಗಾ ವಹಿಸಲು ಸಾಧ್ಯವಾಗಲಿದೆ.

ಕನಿಷ್ಠ ಬೆಂಬಲ ಬೆಲೆ (MSP) ಖರೀದಿ

2025-26ನೇ ಸಾಲಿನಲ್ಲಿ 5.69 ಲಕ್ಷ ಮೆಟ್ರಿಕ್ ಟನ್ ರಾಗಿ, 2.21 ಲಕ್ಷ ಮೆಟ್ರಿಕ್ ಟನ್ ಜೋಳ ಹಾಗೂ 0.0567 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ರೈತರಿಂದ ಖರೀದಿಸಲಾಗಿದೆ. ಈ ಯೋಜನೆಯ ಒಟ್ಟು ಮೊತ್ತ ರೂ. 4422.17 ಕೋಟಿ. ಇದರಿಂದ 289350 ರೈತರಿಗೆ ನ್ಯಾಯಯತ ಬೆಲೆ ದೊರೆತಿದೆ. ಪ್ರತಿ ಕ್ವಿಂಟಾಲ್‌ಗೆ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆ.
ವರ್ಷ 2025-26 2026-27
ರಾಗಿ 4,886 5,205
ಜೋಳ 3,699 4,023
ಭತ್ತ 2,375 2,461

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ₹1,902.58 ಕೋಟಿ MSP ಮರುಪಾವತಿಯನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಅದರ ಫಲವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ₹190.10 ಕೋಟಿ ಬಿಡುಗಡೆಯಾಗಿದೆ.

ಕಾಳಸಂತೆ ತಡೆ ಮತ್ತು ಜಾರಿ ಕ್ರಮ

ಪಡಿತರ ಆಹಾರಧಾನ್ಯಗಳ ಅಕ್ರಮ ಸಾಗಾಣಿಕೆ ಹಾಗೂ ಕಾಳಸಂತೆ ತಡೆಗಟ್ಟಲು ಇಲಾಖೆಯು ಕಟ್ಟುನಿಟ್ಟಿನ ಜಾರಿ ಕ್ರಮಗಳನ್ನು ಕೈಗೊಂಡಿದೆ.

ಕಳೆದ ಮೂರು ವರ್ಷಗಳಲ್ಲಿ 1,497 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ₹49.38 ಕೋಟಿ ಮೌಲ್ಯದ 2,86,181 ಕ್ವಿಂಟಲ್ ಆಹಾರಧಾನ್ಯ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾನೂನು ಮಾಪನಶಾಸ್ತ್ರ ಇಲಾಖೆ ಬಲವರ್ಧನೆ

ಕಾನೂನು ಮಾಪನಶಾಸ್ತ್ರ ಇಲಾಖೆಯನ್ನು ಪುನರ್‌ರಚಿಸಿ ತಪಾಸಣೆ ಹಾಗೂ ಗ್ರಾಹಕರ ಜಾಗೃತಿಗಾಗಿ 17 ಹೊಸ ವಾಹನಗಳನ್ನು ಒದಗಿಸಲಾಗಿದೆ.

ಇಲಾಖೆಯು 2023-24ರಲ್ಲಿ ₹83.19 ಕೋಟಿ, 2025-26ರಲ್ಲಿ ₹90.09 ಕೋಟಿ ರಾಜಸ್ವ ಸಂಗ್ರಹಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲೇ ₹17.67 ಕೋಟಿ ರಾಜಸ್ವ ಸಂಗ್ರಹಿಸುವ ಮೂಲಕ ಉತ್ತಮ ಸಾಧನೆ ಮಾಡಿದೆ.

ಆಹಾರಸೌಧ ನಿರ್ಮಾಣ

ಸುಮಾರು ₹50 ಕೋಟಿ ವೆಚ್ಚದ ಆಹಾರಸೌಧ ನಿರ್ಮಾಣ ಕಾಮಗಾರಿ ಶೇ.50ರಷ್ಟು ಪೂರ್ಣಗೊಂಡಿದೆ. ಕಾಮಗಾರಿ ಪೂರ್ಣಗೊಂಡ ನಂತರ ಇಲಾಖೆಯ ಎಲ್ಲಾ ಕಚೇರಿಗಳು ಒಂದೇ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಲಿದ್ದು, ಆಡಳಿತಾತ್ಮಕ ಸಮನ್ವಯ ಮತ್ತು ಸಾರ್ವಜನಿಕ ಸೇವೆ ಮತ್ತಷ್ಟು ಸುಧಾರಿಸಲಿದೆ.

FIST APPLICATION 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿರುವಂತೆ ಮೂಲಕ ಚಿಲ್ಲರೆ ಮತ್ತು ಸಗಟುದಾರರಿಗೆ DBT ಮೂಲಕ ನೇರವಾಗಿ ಚಿಲ್ಲರೆ ಮತ್ತು ಸಗಟುದಾರರ ಬ್ಯಾಂಕ್‌ ಖಾತೆ ಹಣ ವರ್ಗಾವಣೆ ಮಾಡಿ, ಪಾದರ್ಶಕತೆಗೆ ಆದ್ಯತೆ ನೀಡಲಾಗಿದೆ.

ಪಾರದರ್ಶಕ ಆಡಳಿತ ಮತ್ತು ಮಾನವ ಸಂಪನ್ಮೂಲ ಬಲವರ್ಧನೆ

ಇಲಾಖೆಯ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ 376 ನೂತನ ಸಿಬ್ಬಂದಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಇದರಿಂದ ಇಲಾಖೆಯ ಕಾರ್ಯಕ್ಷಮತೆ ವೃದ್ಧಿಯಾಗುವುದರ ಜೊತೆಗೆ ಸಾರ್ವಜನಿಕರಿಗೆ ಇನ್ನಷ್ಟು ತ್ವರಿತ, ಪರಿಣಾಮಕಾರಿ ಹಾಗೂ ಗುಣಮಟ್ಟದ ಸೇವೆಗಳನ್ನು ಒದಗಿಸಲು ನೆರವಾಗಲಿದೆ.

SC/ST ಸಮುದಾಯದವರಿಗೆ ನ್ಯಾಯ ಬೆಲೆ ಅಂಗಡಿ ಮಂಜೂರು.

2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ PDS Control Order ಗೆ ತಿದ್ದುಪಡಿ ತಂದು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಹಾಗೂ ಇತರೆ ಸಮುದಾಯದ ನಿರುದ್ಯೋಗ ವಿದ್ಯಾವಂತ ಯುವಕ/ ಯುವತಿಯವರಿಗೆ ನ್ಯಾಯ ಬೆಲೆ ಅಂಗಡಿಯನ್ನು ಮಂಜೂರು ಮಾಡಲು ಆದೇಶ ಹೊರಡಿಸಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಂಜೂರು ಮಾಡಲು ನಿರ್ದೇಶನ ನೀಡಲಾಗಿದೆ.

ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಯಂತೆ ಉಪವರ್ಗೀಕರಣದಂತೆ 3888 ನ್ಯಾಯ ಬೆಲೆ ಅಂಗಡಿಯನ್ನು ಮಂಜೂರು ಮಾಡುವ ಮೂಲಕ ವಿದ್ಯಾವಂತ ನಿರುದ್ಯೋಗಿಗಳಿಗೆ ಹೊಸ ನ್ಯಾಯ ಬೆಲೆ ಅಂಗಡಿಗಳನ್ನು ನಡೆಸಲು ಅನುಕೂಲ ಮಾಡಲಾಗಿದೆ.

ಆಹಾರ ಭದ್ರತೆ, ರೈತರ ಹಿತಾಸಕ್ತಿ, ಫಲಾನುಭವಿಗಳ ಕಲ್ಯಾಣ, ತಂತ್ರಜ್ಞಾನ ಆಧಾರಿತ ಆಡಳಿತ ಹಾಗೂ ಪಾರದರ್ಶಕ ಸೇವಾ ವಿತರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಮುಂದಿನ ದಿನಗಳಲ್ಲಿಯೂ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ಜನಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಇಲಾಖೆ ನಿರಂತರವಾಗಿ ಕಾರ್ಯನಿರ್ವಹಿಸಲಿದೆ ಎಂದರು
ಕಾರ್ಯಕ್ರಮದಲ್ಲಿ ಸರ್ಕಾರದ ಕಾರ್ಯದರ್ಶಿ ಕನಗವಲ್ಲಿ,ಆಯುಕ್ತರಾದ ರವಿಕುಮಾರ್,ನಿಗಮದ ನಿರ್ದೇಶಕರಾದ ಜಗದೀಶ್ ಹಾಗೂ ನಿಗಮದ ಉಪಾಧ್ಯಕ್ಷರಾದ ಊರಬಾಗಿಲು ಶ್ರೀನಿವಾಸ್, ನಿಗಮದ ಪ್ರಧಾನ ವ್ಯವಸ್ಥಾಪಕರಾದ ಮಂಜುನಾಥ್ ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್ ಹಾಗೂ ನಿಗಮದ ಸಿಬ್ಬಂದಿ ಉಪಸ್ಥಿತರಿದ್ದರು

ಹೆಚ್ಚಿನ ಸುದ್ದಿ