ಬೆಂಗಳೂರು: ಈ ಭೂಮಿಯೇ ನನ್ನ ಕ್ಯಾನ್ವಾಸ್ ಎನ್ನುವ ಈ ಕಲಾವಿದ, ಬೇರೆ ಕಲಾವಿದರಿಗಿಂತ ಕೊಂಚ ಭಿನ್ನ.. ಕಲೆಯ ಮುಖಾಂತರ ಸಮಾಜಕ್ಕೆ ಸಂದೇಶ ನೀಡುವ ಕಲಾವಿದ ಬಾದಲ್ ನಂಜುಂಡಸ್ವಾಮಿ ಚುನಾವಣೆ ಹೊತ್ತಲ್ಲಿ ಕಲೆಯ ಮುಖಾಂತರವೇ ಜನತೆಗೊಂದು ಸಂದೇಶ ನೀಡಿದ್ದಾರೆ
ಎಲೆಕ್ಷನ್ ಕಣಕ್ಕಿಳಿದಿರುವ ಅಭ್ಯರ್ಥಿಗಳು ಸೀರೆ, ಬಟ್ಟೆ, ಮೂಗುತಿ ಹೀಗೆ ಹತ್ತಾರು ಆಮಿಷಗಳನ್ನೊಡ್ಡಿ ಮತ ಕೇಳೋದು ಪ್ರತೀ ಚುನಾವಣೆ ವೇಳೆಯ ಸುದ್ದಿ. ಈ ಬಾರಿ ಈ ಆಮಿಷಗಳ ಸಾಲಿಗೆ ಕುಕ್ಕರ್ ಮತ್ತು ತವಾ ಹೊಸ ಸೇರ್ಪಡೆ. ಇದೇ ವಿಚಾರವನ್ನಾಧರಿಸಿ ಬಾದಲ್ ಕುಕ್ಕರ್ ಚಿತ್ರವೊಂದನ್ನ ಬಿಡಿಸಿ ಅದರ ಮೇಲೆ ವೋಟ್ ಸೆನ್ಸಿಬಲಿ ಎಂದು ಬರೆದಿದ್ದಾರೆ. ಯೋಚಿಸಿ ಮತ ಚಲಾಯಿಸಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿ ಅನ್ನೋದು ಬಾದಲ್ ಚಿತ್ರಕಲೆಯ ಸಂದೇಶ
ಬೆಂಗಳೂರಿನ ಯಲಹಂಕದ ಮನೆಯ ಗೋಡೆಯೊಂದರ ಮೇಲೆ ಈ ಪೇಂಟಿಂಗ್ ಅರಳಿದೆ. ಚುನಾವಣೆಯಲ್ಲಿ ವೋಟ್ ಹಾಕುವುದು ಎಷ್ಟು ಮುಖ್ಯವೋ.. ಅರ್ಹ ಅಭ್ಯರ್ಥಿಗೆ ಮತ ಚಲಾಯಿಸಿವುದೂ ಅಷ್ಟೇ ಮುಖ್ಯ. ಸಣ್ಣ ಪುಟ್ಟ ಕುಕ್ಕರ್ನಂತಹ ಆಮಿಷಗಳಿಗೆ ಕೈಯೊಡ್ಡಿ ಅಸಮರ್ಥ ನಾಯಕನ ಆಯ್ಕೆ ಮಾಡಬೇಡಿ ಎಂದು ಬಾದಲ್ ತಮ್ಮ ಕಲೆಯ ಮುಖಾಂತರ ಸಾರುತ್ತಿದ್ದಾರೆ.
“5 ವರ್ಷಕ್ಕೊಮ್ಮೆ ಮತದಾರರಿಗೆ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಅಮೂಲ್ಯವಾದ ಅವಕಾಶ ಸಿಗುತ್ತೆ. ಜನ ಈ ಕೆಲಸವನ್ನು ಅತ್ಯಂತ ಜಾಗರೂಕತೆಯಿಂದ ಮಾಡಬೇಕು. ಹಣ, ಹೆಂಡ, ಜಾತಿ, ಕುಕ್ಕರ್, ಸೀರೆಗಳಿಗೆ ಮಾರುಹೋಗದೇ ಯೋಚಿಸಿ ಮತ ಚಲಾಯಿಸಬೇಕು ಅನ್ನೋದೇ ಅನ್ನ ಆಶಯ” – ಬಾದಲ್ ನಂಜುಂಡಸ್ವಾಮಿ, ಕಲಾವಿದ
