ಬೆಂಗಳೂರು: ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ನಡುವೆಯೇ ರಾಜ್ಯದಲ್ಲಿ ಸುಮಾರು 14.3 ಲಕ್ಷ ಜನರು ಕೋವಿಡ್ ಎರಡನೇ ಡೋಸ್ ಲಸಿಕೆ ಪಡೆದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ವರದಿ ಬಿಡುಗಡೆ ಮಾಡಿದೆ.
ಸತತವಾಗಿ ಮೂರು ಕೋವಿಡ್ ಅಲೆಗಳನ್ನು ಎದುರಿಸುವ ಕರ್ನಾಟಕದಲ್ಲಿ ಲಕ್ಷಾಂತರ ಜನರು ಇನ್ನೂ ಕೋವಿಡ್ ಎರಡನೇ ಡೋಸ್ ಲಸಿಕೆಯನ್ನೇ ಪಡೆದಿಲ್ಲ ಎಂಬ ಮಾಹಿತಿಯನ್ನು ಕರ್ನಾಟಕ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ನ ನಿರ್ದೇಶಕ ನವೀನ್ ಭಟ್ ತಿಳಿಸಿದ್ದಾರೆ. ಇದರ ಜತೆಗೆ ರಾಜ್ಯದಲ್ಲಿ 3.96 ಕೋಟಿ ಜನರು ತಮ್ಮ ಮುನ್ನೆಚ್ಚರಿಕೆಯ ಡೋಸ್ ಪಡೆದಿಲ್ಲ. ಪ್ರಸ್ತುತ ರಾಜ್ಯದಲ್ಲಿ ಕೇವಲ ಶೇ.23 ರಷ್ಟು ಜನ ಮಾತ್ರ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದೆ.
ಲಸಿಕೆಗಳ ಕೊರತೆಯೊಂದಿಗೆ, ಈ ಅಂಕಿಅಂಶಗಳು ಈಗ ಕಳವಳಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,950 ದಾಟಿದೆ. ರಾಜ್ಯದಲ್ಲಿ 377 ಹೊಸ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ನಗರವೊಂದರಲ್ಲೇ 263 ಹೊಸ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಶಿವಮೊಗ್ಗ 23, ದಾವಣಗೆರೆ 12, ಕಲಬುರಗಿ 12, ಬಳ್ಳಾರಿ 9 , ತುಮಕೂರು 9, ಮತ್ತು ಚಿಕ್ಕಮಗಳೂರು 7 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
