ಬೊಮ್ಮಾಯಿ ಅವರ ಸರ್ಕಾರಗ ಟೆಂಡರ್ ಗಳಲ್ಲಿ 40% ಕಮಿಷನ್ ಪಡೆಯಲು ಕಾನೂನುಬಾಹಿರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೆಲ್ಲವನ್ನು ನೋಡಿ ಸುಮ್ಮನೆ ಕೂತಿರುವ ಚುನಾವಣಾ ಆಯೋಗದ ಮೇಲೆ ನಂಬಿಕೆ ಕುಗ್ಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.
ಚುನಾವಣೆ ದಿನಾಂಕ ಘೋಷಿಸುವ ಮುನ್ನ ಅನೇಕ ಟೆಂಡರ್ ಗಳನ್ನು ಸಮರ್ಪಕ ಪ್ರಕ್ರಿಯೆ ಮೂಲಕ ಹೊರಡಿಸಿಲ್ಲ. ಟೆಂಡರ್ ಅಂದಾಜು ಮೊತ್ತ, ಕಾಲಾವಧಿ ನಿಗದಿಯಾಗದೇ ಟೆಂಡರ್ ನೀಡಲಾಗಿದೆ. ಇಲಾಖೆವಾರು ಕಾಮಗಾರಿ ವೆಚ್ಚದ ಪರಿಶೀಲನೆ ಇಲ್ಲದೆ ಟೆಂಡರ್ ನೀಡಲಾಗಿದೆ. ಬೊಮ್ಮಾಯಿ ಸರ್ಕಾರ ಕೇವಲ 40% ಕಮಿಷನ್ ಪಡೆಯುವ ಏಕಮಾತ್ರ ಉದ್ದೇಶದಿಂದ ಈ ರೀತಿ ಅಕ್ರಮವಾಗಿ ಟೆಂಡರ್ ನೀಡಿದೆ ಎಂದು ಅವರು ಹೇಳಿದ್ದಾರೆ.
ಶಿರಾಡಿ ಘಾಟ್ ಟೆಂಡರ್ ಗೆ 1976 ಕೋಟಿ, ದೊಡ್ಡಬಳ್ಳಾಪುರದ ಕಾಮಗಾರಿಕೆ 1682 ಕೋಟಿ, ಆಂಧ್ರ ಪ್ರದೇಶ-ಕರ್ನಾಟಕ ಗಡಿ ಭಾಗದ ರಾಯಚೂರಿನಲ್ಲಿ 1633 ಕೋಟಿ, ಹಾಸನ ನಾಲ್ಕು ಪಥ ರಸ್ತೆಗೆ 1318 ಕೋಟಿ, ವಿವಿಧ ಬೈಪಾಸ್ಗಳ ಅಭಿವೃದ್ಧಿಗೆ 1167 ಕೋಟಿ ಹೀಗೆ ದೊಡ್ಡ ಪಟ್ಟಿಗಳಿವೆ. ಒಟ್ಟು 16,516 ಕೋಟಿ ಮೊತ್ತದ ಟೆಂಡರ್ ಗಳನ್ನು ತರಾತುರಿಯಲ್ಲಿ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಸರ್ಕಾರ ಟೆಂಡರ್ ಮಾಫಿಯಾದಲ್ಲಿ 16 ಸಾವಿರ ಕೋಟಿ ಅಕ್ರಮ ಟೆಂಡರ್ ನೀಡಿದ್ದು, ಚುನಾವಣಾ ಆಯೋಗ ಅದಕ್ಕೆ ತಡೆ ನೀಡಿದ್ದು, ಇದು ಬೊಮ್ಮಾಯಿ ಅವರ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಬೊಮ್ಮಾಯಿ ಅವರಿಗೆ ಕಿಂಚಿತ್ತಾದರೂ ನೈತಿಕತೆ ಇದ್ದರೆ ಈಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ.
