Monday, March 2, 2026
Homeಟಾಪ್ ನ್ಯೂಸ್ʼಗಡಿಪಾರು ಮಾಡುವ ಅತಿರೇಕʼ: ಚೇತನ್‌ ವಿಸಾ ರದ್ದತಿಗೆ ಕಿಶೋರ್‌ ಟೀಕೆ

ʼಗಡಿಪಾರು ಮಾಡುವ ಅತಿರೇಕʼ: ಚೇತನ್‌ ವಿಸಾ ರದ್ದತಿಗೆ ಕಿಶೋರ್‌ ಟೀಕೆ

ಬೆಂಗಳೂರು: ಹಿಂದುತ್ವ ಹಾಗೂ ಸಾಮಾಜಿಕ ಅಸಮಾನತೆ ವಿರುದ್ಧ ದನಿಯೆತ್ತಿ ಪದೇ ಪದೇ ಸುದ್ದಿಯಾಗುತ್ತಿರುವ ನಟ ಚೇತನ್ ಅಂಹಿಸಾ ಅವರ ವೀಸಾ ರದ್ದಾಗಿರುವ ಕುರಿತಂತೆ ನಟ ಕಿಶೋರ್‌ ಪ್ರತಿಕ್ರಿಯೆ ನೀಡಿದ್ದಾರೆ.

  ಚೇತನ್‌ ಹೆಸರನ್ನು ಉಲ್ಲೇಖಿಸದೆ ಪರೋಕ್ಷ ಪೋಸ್ಟ್‌ ಹಾಕಿರುವ ನಟ ಕಿಶೋರ್‌, “ಹಿಂದುತ್ವ ಎನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನಸ್ಥಿತಿ ಇರುವಂತಹದ್ದು” ಎಂದು ಹೇಳಿದ್ದಾರೆ.

“ಆದರೆ ‘ಹಿಂದುತ್ವ’ ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿಯಷ್ಟೇ”

“ಹಾಗಾಗಿ ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತು ಎನ್ನುವುದು ಎಷ್ಟು ಉಚಿತ?? ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ?. ಆ ನಿಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿಕೊಂಡು ಹಿಂದೂ ಧರ್ಮವನ್ನು ಎಲ್ಲರಿಗೂ ಮಾದರಿಯಾಗಿಸಬೇಕಲ್ಲವೇ?. ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನಮ್ಮದೇ ಜನರನ್ನು ನಿಂದಿಸುವ, ಆರೋಪಿಸುವ, ಜೈಲಿಗೆ ಹಾಕುವ ಅಥವಾ ಗಡಿಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು?”  ಎಂದು ಕಿಶೋರ್‌ ಪೋಸ್ಟ್‌ ಹಾಕಿದ್ದಾರೆ.

ಹೆಚ್ಚಿನ ಸುದ್ದಿ