ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಈ ಬಾರಿ ಬಿಜೆಪಿ ಹೊಸ ಮುಖಗಳಿಗೆ ಅವಕಾಶ ನೀಡುವಲ್ಲಿ ದಾಖಲೆ ಬರೆದಿದೆ. ಹೊಸಬರಿಗೆ ಟಿಕೆಟ್ ನೀಡುವಲ್ಲಿ ಗುಜರಾತ್ ರಾಜ್ಯವನ್ನೂ ಮೀರಿಸಿರುವ ಬಿಜೆಪಿ ನೂತನ ಕರ್ನಾಟಕ ಮಾಡೆಲ್ ರಚಿಸಿದೆ.
ಗುಜರಾತ್ ಚುನಾವಣೆ ವೇಳೆ 45 ಹೊಸ ಅಭ್ಯರ್ಥಿಗಳನ್ನು ಕಣಕ್ಕಿಸಿದ್ದ ಬಿಜೆಪಿ ಈ ಬಾರಿ ಕರ್ನಾಟಕದಲ್ಲಿ 70ಕ್ಕೂ ಹೆಚ್ಚು ಹೊಸ ಮುಖಗಳಿಗೆ ಟಿಕೆಟ್ ನೀಡಿದೆ.
42 ಹಾಲಿ ಶಾಸಕರು,ಓರ್ವ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಗೆ ಗುಜರಾತ್‌ನಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು. ಬಂಡಾಯವೆದ್ದ ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ 6 ವರ್ಷ ಬಿಜೆಪಿಯಿಂದ ಅಮಾನತ್ತುಗೊಳಿಸಿದ್ದ ಬಿಜೆಪಿ, ಗುಜರಾತ್ ಚುನಾವಣೆಯಲ್ಲಿ 45 ಹೊಸ ಮುಖಗಳಿಗೆ ಟಿಕೆಟ್ ನೀಡಿತ್ತು.
ಬಿಜೆಪಿ ಬಿಡುಗಡೆ ಮಾಡಿದ ಮೂರನೇ ಪಟ್ಟಿಯಲ್ಲಿ 6 ಮಂದಿ ಹೊಸಬರು ಸೇರಿ ಒಟ್ಟು ಇಲ್ಲಿಯವರೆಗೆ 72 ಹೊಸಬರಿಗೆ ಟಿಕೆಟ್ ನೀಡಿದೆ. ಕರ್ನಾಟಕದಲ್ಲಿ ಇಷ್ಟೊಂದು ದಾಖಲೆ ಮಟ್ಟದಲ್ಲಿ ಹೊಸಬರಿಗೆ ಬಿಜೆಪಿ ಟಿಕೆಟ್ ಕೊಟ್ಟಿರುವುದು ಇದೇ ಮೊದಲು. ಈ ಸಲ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದ್ದು, ಇಲ್ಲಿಯವರೆಗೆ 12 ಮಹಿಳೆರಿಗೆ ಟಿಕೆಟ್ ನೀಡಿದೆ.
ಒಟ್ಟು 224 ಕ್ಷೇತ್ರಗಳ ಪೈಕಿ ಇಲ್ಲಿಯವರೆಗೆ 222 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಪ್ರಕಟಿಸಿದ್ದು ಮಾನ್ವಿ ಮತ್ತು ಈಶ್ವರಪ್ಪ ಪ್ರತಿನಿಧಿಸುತ್ತಿರುವ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಘೋಷಣೆಯಾಗಬೇಕಿದೆ.
