Friday, April 17, 2026
Homeರಾಜಕೀಯಬಸವಣ್ಣ ಅಡಿಪಾಯ ಹಾಕಿದ ಪ್ರಜಾಪ್ರಭುತ್ವಕ್ಕೆ ಬಿಜೆಪಿ, ಆರೆಸ್ಸೆಸ್ ನಿಂದ ಅಪಾಯ: ರಾಹುಲ್

ಬಸವಣ್ಣ ಅಡಿಪಾಯ ಹಾಕಿದ ಪ್ರಜಾಪ್ರಭುತ್ವಕ್ಕೆ ಬಿಜೆಪಿ, ಆರೆಸ್ಸೆಸ್ ನಿಂದ ಅಪಾಯ: ರಾಹುಲ್

ಹುಮ್ನಾಬಾದ್: ಬೀದರ್ ಬಸವಣ್ಣನವರ ಕರ್ಮಭೂಮಿಯಾಗಿದ್ದು, ಬಸವಣ್ಣ ಶತಮಾನಗಳ ಹಿಂದೆಯೇ ಲೋಕತಂತ್ರದ ಬಗ್ಗೆ ಮಾತನಾಡಿದ್ದರು. ಇಂದು ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದ್ದರೆ ಅದಕ್ಕೆ ಅಡಿಪಾಯ ಹಾಕಿದವರು ಬಸವಣ್ಣನವರು. ಆದರೆ ಇಂದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಬಿಜೆಪಿ ಹಾಗೂ ಆರ್ ಎಸ್ಎಸ್ ದಾಳಿ ಮಾಡುತ್ತಿದೆ. ಸಮಾಜದಲ್ಲಿ ದ್ವೇಷ ಬಿತ್ತಿ, ಹಿಂಸೆ ಹೆಚ್ಚಿಸುತ್ತಿದೆ ಎನ್ನುವುದೇ ದುರಂತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಬೀದರ್ ನ ಹುಮ್ನಾಬಾದ್ ನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲ ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಈ ಬಾರಿ ಕಾಂಗ್ರೆಸ್ 150 ಕ್ಷೇತ್ರಗಳಲ್ಲಿ ಗೆಲ್ಲಲಿದೆ. 40% ಕಮಿಷನ್ ಸರ್ಕಾರಕ್ಕೆ 40ಕ್ಕಿಂತ ಹೆಚ್ಚು ಸೀಟು ಸಿಗುವುದಿಲ್ಲ ಎಂದವರು ಹೇಳಿದರು.

ಬಿಜೆಪಿ ಸರ್ಕಾರ ನುಡಿದಂತೆ ನಡೆದಿಲ್ಲ. ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುತ್ತೇವೆ ಎಂದರು. ನಿಮಗೆ ಆ ಹಣ ಸಿಕ್ಕಿತೇ?, ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು, ನಿಮಗೆ ಉದ್ಯೋಗ ಸಿಕ್ಕಿತೇ?, ನೋಟು ರದ್ದು ಮಾಡಿ ಕಪ್ಪುಹಣ ನಿರ್ಮೂಲನೆ ಮಾಡುತ್ತೇವೆ ಎಂದರು. ಕಪ್ಪು ಹಣ ನಿರ್ಮೂಲನೆಯಾಯಿತೇ? ಎಂದು ಪ್ರಶ್ನಿಸಿದ ಅವರು, ಬಿಜೆಪಿ ಕೇವಲ ಸುಳ್ಳಿನ ಆಶ್ವಾಸನೆ ನೀಡುತ್ತಾ ಬಂದಿದೆ ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆ ಒಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ, ಗೃಹಜ್ಯೋತಿ ಮೂಲಕ ಪ್ರತಿ ತಿಂಗಳು ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ, ಅನ್ನಭಾಗ್ಯ ಬಡ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತ ಹಾಗೂ ಯುವನಿಧಿ ಯೋಜನೆ ಮೂಲಕ ನಿರುದ್ಯೋಗ ಪದವೀಧರ ಯುವಕರಿಗೆ 3 ಸಾವಿರ ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದವರು ಹೇಳಿದರು.

ನಾನು ಸಂಸತ್ತಿನಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಅದಾನಿ–ಮೋದಿ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದೆ. ಅವರು ನನ್ನ ಮೈಕ್ ಆಫ್ ಮಾಡಿ ಸಂಸತ್ತಿನಿಂದ ಅನರ್ಹನನ್ನಾಗಿ ಮಾಡಿದರು. ಲೋಕಸಭೆಯಿಂದ ಹೊರಹಾಕಿದರು. ಕಾರಣ ನಾನು ಭ್ರಷ್ಟಾಚಾರದ ಬಗ್ಗೆ ಮೋದಿ ಅವರನ್ನು ಪ್ರಶ್ನಿಸಿದ್ದೆ. ಬಿಜೆಪಿಯವರ ಈ ದಬ್ಬಾಳಿಕೆಗೆ ನಾನು ಹೆದರುವುದಿಲ್ಲ. ಕರ್ನಾಟಕ ರಾಜ್ಯದ ಜನರೂ ಹೆದರುವುದಿಲ್ಲ. ರಾಜ್ಯದ ಜನ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. 40% ಕಮಿಷನ್ ಹಣ ನಿಮ್ಮ ಹಣ ಎಂದು ರಾಹುಲ್ ಇದೇ ಸಂದರ್ಭ ಹೇಳಿದರು.

ಹೆಚ್ಚಿನ ಸುದ್ದಿ