ಮೈಸೂರು: ಕುತೂಹಲ ಮೂಡಿಸಿರುವ ವರುಣಾ ರಾಜಕಾರಣಕ್ಕೆ ಸಿದ್ದರಾಮಯ್ಯ ಮೊಮ್ಮಗ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ. ತಾತ ಸಿದ್ದರಾಮಯ್ಯ ಪರ ಪ್ರಚಾರದ ಅಖಾಡಕ್ಕೆ ಮೊಮ್ಮಗ ಧವನ್ ರಾಕೇಶ್ ಇಳಿದಿದ್ದಾರೆ ಎಂದು ಹೇಳಲಾಗಿದೆ.
ಮೈಸೂರಿನ ಏರ್‌ಪೋರ್ಟ್‌ನಲ್ಲಿ ಸಿದ್ದರಾಮಯ್ಯ ಜೊತೆ ಧವನ್ ರಾಕೇಶ್ ಕಾಣಿಸಿಕೊಂಡಿದ್ದು, ಮೊಮ್ಮಗನಿಗೆ ರಾಜಕೀಯದಲ್ಲಿ ಇರುವ ಆಸಕ್ತಿಯನ್ನು ಕಂಡು ಸಿದ್ದರಾಮಯ್ಯ ಖುಷಿಯಾಗಿದ್ದಾರೆ.
ಮೊಮ್ಮಗ ರಾಜಕೀಯ ಆಸಕ್ತಿ ತೋರಿಸೋದು ಸಹಜವಾಗಿಯೇ ಖುಷಿ ಆಗುತ್ತೆ. ಇಡೀ ಚಾಮುಂಡೇಶ್ವರಿ, ವರುಣಾ ಕ್ಷೇತ್ರವನ್ನು ಅವರಪ್ಪ ರಾಕೇಶ್ ನಿರ್ವಹಿಸುತ್ತಿದ್ದ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಕೇಶ್ ಇದ್ದಾಗ ಇಡೀ ಜಿಲ್ಲೆ ನೋಡಿಕೊಳ್ಳುತ್ತಿದ್ದ. ಅಪ್ಪನ ರಕ್ತ ಅಲ್ವ? ಅವನಿಗೂ ರಾಜಕೀಯದಲ್ಲಿ ಆಸಕ್ತಿ ಬಂದಿದೆ. ಅವನಾಗಿಯೇ ಇಷ್ಟಪಟ್ಟು ನನ್ನೊಂದಿಗೆ ಮೈಸೂರಿಗೆ ಬಂದಿದ್ದಾನೆ. ವರುಣದಲ್ಲಿ ಪ್ರಚಾರಕ್ಕೆ ಹೋಗಲು ನಾನು ಹೇಳಲ್ಲ. ನಮ್ಮ ಮನೆಯ ಯಾರನ್ನೂ ನಾನು ಪ್ರಚಾರಕ್ಕೆ ಕರೆಯಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಕೇಶ್ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಧವನ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
